`ಕುಮಟಾ-ಶಿರಸಿ ರಾಷ್ಟ್ರೀಯ ಹೆದ್ದಾರಿ ಹಾಗೂ ಭಟ್ಕಳ-ಕಾರವಾರ ಗಡಿವರೆಗಿನ ಚತುಷ್ಪಥ ಕಾಮಗಾರಿ ಪೂರ್ಣಗೊಳಿಸಲು ಆಡಳಿತಾತ್ಮಕ ಸಮಸ್ಯೆಯಿದ್ದು, ಡಿಸೆಂಬರ್ ಒಳಗೆ ಆ ಸಮಸ್ಯೆ ಬಗೆಹರಿಸಲಾಗುತ್ತದೆ’ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದರು. ವಿವಿಧ ಇಲಾಖೆಗಳ ಸಭೆ ನಡೆಸಿದ ನಂತರ ಸುದ್ದಿಗಾರರ ಜೊತೆ ಮಾತನಾಡಿದ ಅವರು `ಕರಾವಳಿಯಲ್ಲಿ 187 ಕಿ.ಮೀ ಉದ್ದದ ಚತುಷ್ಪಥ ನಿರ್ಮಿಸಲು 2014ರಲ್ಲಿ ಗುತ್ತಿಗೆ ನೀಡಲಾಯಿತು. ಈಗಾಗಲೆ 180ಕಿಮೀ ಕೆಲಸ ಮುಗಿದಿದೆ. ಇನ್ನುಳಿದ 7 ಕಿಮೀ ಕೆಲಸಕ್ಕೆ ಅಡ್ಡಿಯಾಗಿರುವ ಆಡಳಿತಾತ್ಮಕ ಸಮಸ್ಯೆ ಬಗೆಹರಿಯಲಿದೆ’ ಎಂದರು.
ಹೊ0ಡ ಮುಚ್ಚುವ ಕೆಲಸ ಶುರು
`ಅಂಕೋಲಾ-ಯಲ್ಲಾಪುರ ಹೆದ್ದಾರಿಯಲ್ಲಿ ಬಿದ್ದಿರುವ ಹೊಂಡಗಳನ್ನು ಮುಚ್ಚುವ ಕೆಲಸ ನಡೆಯುತ್ತಿದೆ. ಅಗತ್ಯವಿರುವ ಕಡೆ ಮರುಡಾಂಬರೀಕರಣ ಸಹ ನಡೆಯಲಿದೆ. ಕಾರವಾರದಿಂದ ಭಟ್ಕಳ ವರೆಗಿನ ಚತುಷ್ಪಥದಲ್ಲೂ ಹೊಂಡ ತುಂಬುವ ಕೆಲಸ ನಡೆಯುತ್ತಿದೆ. ಕುಮಟಾ ಭಾಗದ ಚತುಪ್ಪಥ ಕಾಮಗಾರಿಯನ್ನು ಟೆಂಡರ್‌ನಲ್ಲಿ ನಮೂದಿಸಿದ ರೀತಿಯಲ್ಲಿಯೇ ನಡೆಸಲು ಸೂಚನೆ ಕೊಡಲಾಗಿದೆ’ ಎಂದರು.
`ಚತುಷ್ಪಥ ನಿರ್ಮಾಣವಾದ ಅನೇಕ ಕಡೆ ಪ್ಲೆಓವರ್, ಅಂಡರ್ ಪಾಸ್ ಸೇರಿದಂತೆ ಇನ್ನು ಅನೇಕವನ್ನು ನಿರ್ಮಿಸಿ ಕೊಡುವ ಬೇಡಿಕೆ ಜನರಿಂದ ಬಂದಿದೆ. ಆದರೆ ಅವು ಈಗಾಗಲೆ ನೀಡಿರುವ ಟೆಂಡರ್‌ನಲ್ಲಿ ಇಲ್ಲ. ಈ ಬೇಡಿಕೆಗಳಿಗೆ ನನ್ನ ಸಹ ಮತವಿದೆ. ಆದರೆ, ಈಗ ಅದು ಅಸಾಧ್ಯವಾಗಿದ್ದು, ಮುಂದಿನ ದಿನಗಳಲ್ಲಿ ಕೇಂದ್ರ ಸರ್ಕಾರದ ಮೂಲಕ ಅದನ್ನು ಮಾಡಿಸಲಾಗುತ್ತದೆ’ ಎಂಬ ಭರವಸೆ ನೀಡಿದರು. `ಕುಮಟಾದಲ್ಲಿ ಬೈಪಾಸ್ ನಿರ್ಮಿಸುವ ಪ್ರಸ್ತಾಪವಿದೆ. ಪರ-ವಿರೋಧ ಎರಡೂ ಇದ್ದಿದ್ದರಿಂದ ಈ ಬಗ್ಗೆ ಇನ್ನಷ್ಟು ಚರ್ಚೆ ಅಗತ್ಯ’ ಎಂದರು.
`ಕುಮಟಾ-ಶಿರಸಿ ರಾ.ಹೆದ್ದಾರಿ ಕಾಮಗಾರಿಗೆ ಸಂಬoಧಿಸಿದ ಪರಿಹಾರ ಕೊಡಬೇಕಾದ 87 ಜನರಲ್ಲಿ 77 ಜನರಿಗೆ ಪರಹಾರ ವಿತರಿಸಲಾಗಿದೆ. 10 ಜನರು ವಿಳಾಸದಲ್ಲಿ ಇಲ್ಲದ ಕಾರಣ ಅವರ ಹುಡುಕಾಟ ನಡೆದಿದೆ. ಈ ಕಾಮಗಾರಿಗಾಗಿ ರಸ್ತೆ ಸಂಪೂರ್ಣ ಬಂದ್ ಮಾಡುವುದು ಅನಿವಾರ್ಯ’ ಎಂದು ಹೇಳಿದರು. `ಮುಂದಿನ ಮಳೆಗಾಲದ ಒಳಗೆ ಕುಮಟಾ-ಶಿರಸಿ ರಾ.ಹೆದ್ದಾರಿ ಹಾಗು ಭಟ್ಕಳ-ಕಾರವಾರ ಗಡಿವರೆಗಿನ ಚತುಷ್ಪಥ ಕಾಮಗಾರಿ ಮುಗಿಸಲು ನಿರ್ಧರಿಸಲಾಗಿದೆ’ ಎಂದು ತಿಳಿಸಿದರು.