ಯಲ್ಲಾಪುರ: 2021ರಲ್ಲಿ ಮುಖ್ಯಮಂತ್ರಿಗಳ ಬಂಗಾರ ಪದಕ ಪಡೆದಿದ್ದ ಯಲ್ಲಾಪುರ ಸಿಪಿಐ ರಮೇಶ ಹಾನಾಪುರ ಅವರಿಗೆ ಇದೀಗ ಕೇಂದ್ರ ಸರ್ಕಾರದ `ದಕ್ಷತಾ ಪದಕ’ ದೊರೆತಿದೆ. ಅತ್ಯಾಚಾರ ಪ್ರಕರಣವೊಂದರಲ್ಲಿ ಸಂತ್ರಸ್ತೆಗೆ ನ್ಯಾಯ ದೊರಕಿಸಿಕೊಡಲು ಶ್ರಮಿಸಿದನ್ನು ಗುರುತಿಸಿದ ಕೇಂದ್ರ ಸರ್ಕಾರ ಅವರಿಗೆ ಈ ಪ್ರಶಸ್ತಿ ಘೋಷಿಸಿದೆ.
2019ರ ಅವಧಿಯಲ್ಲಿ ಬಾದಾಮಿಯಲ್ಲಿ ಯುವತಿಯ ಮೇಲೆ ಅತ್ಯಾಚಾರ ನಡೆದಿತ್ತು. ಆರೋಪಿ ಅತ್ಯಂತ ಕ್ರೂರವಾಗಿ ವರ್ತಿಸಿದ್ದು, ಆ ವೇಳೆ ಅಲ್ಲಿ ಕರ್ತವ್ಯ ನಿಭಾಯಿಸುತ್ತಿದ್ದ ರಮೇಶ ಹಾನಾಪುರ ಅವರು ಸಂತ್ರಸ್ತೆಗೆ ನ್ಯಾಯ ಕೊಡಿಸುವಲ್ಲಿ ಸಾಕಷ್ಟು ಶ್ರಮಿಸಿದ್ದರು. 20 ಸಾಕ್ಷಿ ಹಾಗೂ 82 ದಾಖಲೆಗಳನ್ನು ಸಂಗ್ರಹಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಪ್ರಕರಣ ವಿಚಾರಣೆ ನಡೆಸಿದ ನ್ಯಾಯಾಲಯ ಆರೋಪಿಗೆ ಜೀವಾವಧಿ ಶಿಕ್ಷೆ ವಿಧಿಸುವ ಜೊತೆ ಸಂತ್ರಸ್ತೆಗೆ ಪರಿಹಾರ ಘೋಷಿಸಿತ್ತು. ಈ ಪ್ರಕರಣದಲ್ಲಿ ರಮೇಶ ಹಾನಾಪುರ ಅವರು ಸಂತ್ರಸ್ತೆ ಪರವಾಗಿ ಹೊಂದಿದ ಕಾಳಜಿ ಹಾಗೂ ದಕ್ಷ ಸೇವೆಯನ್ನು ಕೇಂದ್ರ ಗೃಹ ಮಂತ್ರಿ ಸಚಿವಾಲಯ ಗಮನಿಸಿ `ಕೇಂದ್ರೀಯ ಗೃಹಮಂತ್ರಿ ದಕ್ಷತಾ ಪದಕ’ವನ್ನು ನೀಡಿದೆ.
ರಮೇಶ ಹಾನಾಪುರ ಅವರು 2005ರಲ್ಲಿ ಪೊಲೀಸ್ ಸೇವೆಗೆ ಸೇರಿದರು. ಪೊಲೀಸ್ ಸೇವೆಗೆ ಸೇರಿದ ದಿನದಿಂದ ಅವರು ದಕ್ಷತೆಯಿಂದ ಕಾರ್ಯನಿರ್ವಹಿಸಿದನ್ನು ಕೇಂದ್ರ ಸರ್ಕಾರ ಸ್ಮರಿಸಿದೆ. ಮಂಗಳೂರಿನ ಸೂರತ್ಕಲ್’ನಲ್ಲಿ ಸಬ್ ಇನ್ಸಪೆಕ್ಟರ್ ಆಗಿದ್ದ ಅವರು ನಂತರ ಕಾರವಾರದ ಲೋಕಾಯುಕ್ತ ಕಚೇರಿಯಲ್ಲಿ ಕರ್ತವ್ಯದಲ್ಲಿದ್ದರು. 2014ರಿಂದ 2019ರವರೆಗೆ ಲೋಕಾಯುಕ್ತ ಇನ್ಸಪೆಕ್ಟರ್ ಆಗಿದ್ದಾಗ ಭ್ರಷ್ಟ ಅಧಿಕಾರಿಗಳಿಗೆ ನಡುಕ ಹುಟ್ಟಿಸಿದ್ದರು.
ಪ್ರಸ್ತುತ ಅವರು ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಸಿಪಿಐ ಆಗಿ ಕರ್ತವ್ಯದಲ್ಲಿದ್ದಾರೆ. ಸ್ನೇಹಪರ ವ್ಯಕ್ತಿತ್ವದ ಅವರು ಜನಸ್ನೇಹಿ ಪೊಲೀಸ್ ಠಾಣೆಯನ್ನಾಗಿಸುವಲ್ಲಿ ಶ್ರಮಿಸಿದ್ದಾರೆ.