ಹೊನ್ನಾವರ: ಜನ ಸೇರುವ ಕಡೆ ಪೊಲೀಸರು ಭದ್ರತೆಗೆ ಹೋಗುವುದು ಮಾಮೂಲಿ. ಆದರೆ, ಉತ್ತರ ಕನ್ನಡ ಜಿಲ್ಲಾ ಪೊಲೀಸರು ಜನ ಸೇರುವ ಪ್ರದೇಶಗಳಿಗೆ ಸ್ವಯಂ ಪ್ರೇರಣೆಯಿಂದ ತೆರಳಿ ಜನ ಜಾಗೃತಿಯ ಕೆಲಸ ಮಾಡುತ್ತಿದ್ದಾರೆ.
ಭಾನುವಾರ ಹೊನ್ನಾವರದ ಕಾಸರಕೋಡಿನ ಸೆಂಟ್ ಜೋಸೆಫ್ ಚರ್ಚ’ಗೆ ತೆರಳಿದ ಪೊಲೀಸರು ಅಲ್ಲಿ ನೆರೆದಿದ್ದವರಿಗೆ ಕಾನೂನು ತಿಳುವಳಿಕೆ ಮೂಡಿಸಿದರು. ಅಲ್ಲಿ ನೆರೆದಿದ್ದವರೆಲ್ಲರೂ ಏಸುವನ್ನು ಬೇಡಿಕೊಂಡರೆ ಪೊಲೀಸರು `ಕಾನೂನು-ಸುವ್ಯವಸ್ಥೆ ಕಾಪಾಡಲು ಕೈ ಜೋಡಿಸಿ’ ಎಂದು ಸಾರ್ವಜನಿಕರನ್ನು ಪ್ರಾರ್ಥಿಸಿದರು.
ಪಿ ಎಸ್ ಐ ಮಂಜುನಾಥ ಹಾಗೂ ಸಿಬ್ಬಂದಿ ಅಲ್ಲಿ ತೆರಳಿ ಅಪರಾಧ ತಡೆಗೆ ಜನ ಸಾಮಾನ್ಯರು ಮಾಡಬೇಕಾದ ಕೆಲಸಗಳ ಬಗ್ಗೆ ಮಾಹಿತಿ ನೀಡಿದರು. ಈ ವೇಳೆ ಸಂಚಾರಿ ನಿಯಮ ಪಾಲನೆ, ಸೈಬರ್ ಅಪರಾಧ ತಡೆ ಕುರಿತು ಅವರು ನೆರೆದಿದ್ದವರಿಗೆ ಮನವರಿಕೆ ಮಾಡಿದರು.
ಭಗವಂತನಲ್ಲಿ ಬೇಡಿಕೊಳ್ಳಲು ಚರ್ಚ’ಗೆ ಬಂದವರ ಬಳಿ ಪೊಲೀಸರು ಕಾನೂನು ಪಾಲಿಸುವಂತೆ ಪ್ರಾರ್ಥಿಸಿದರು. ಕಾನೂನು ಪಾಲಿಸದೇ ಇದ್ದರೆ ಆಗಬಹುದಾದ ಅವಘಡ ಹಾಗೂ ಶಿಕ್ಷೆಗಳ ಬಗ್ಗೆಯೂ ಅರಿವು ಮೂಡಿಸಿದರು.
ಪೊಲೀಸ್ ಅಧೀಕ್ಷಕ ಎಂ ನಾರಾಯಣ ಅವರ ಸೂಚನೆ ಮೇರೆಗೆ ಜಿಲ್ಲೆಯ ಎಲ್ಲಾ ಕಡೆ ಜನರಲ್ಲಿ ಅರಿವು ಮೂಡಿಸುವ ಕೆಲಸ ಚುರುಕಿನಿಂದ ನಡೆಯುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಜನ ಜಾಗೃತಿ, ಶಾಲಾ-ಕಾಲೇಜಿನ ವಿದ್ಯಾರ್ಥಿಗಳಲ್ಲಿ ಅರಿವು, ಧಾರ್ಮಿಕ ಕೇಂದ್ರಗಳಲ್ಲಿ ಮಾಹಿತಿ ಸೇರಿ ಹಲವು ಬಗೆಯಲ್ಲಿ ಪೊಲೀಸರು ಜನರಿಗೆ ಇನ್ನಷ್ಟು ಹತ್ತಿರವಾಗುತ್ತಿದ್ದಾರೆ.