ರಾಜ್ಯ ಸರ್ಕಾರದ ದುರಾಡಳಿತ, ಅಲ್ಪಸಂಖ್ಯಾತರ ಓಲೈಕೆ ರಾಜಕಾರಣ, ರೈತರ ಭೂಮಿಯ ಮೇಲೆ ವಕ್ಟ್ ಬೋರ್ಡ ಕಣ್ಣು ಹಾಕಿರುವುದನ್ನು ಖಂಡಿಸಿ ಉತ್ತರ ಕನ್ನಡ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿಯೂ ಸೋಮವಾರ ಬಿಜೆಪಿ ಪ್ರತಿಭಟಿಸಿದೆ. ವಿವಿಧ ಹಿಂದೂ ಸಂಘಟನೆಯವರು ಬಿಜೆಪಿ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿದರು.
ಜಿಲ್ಲಾಕೇಂದ್ರ ಕಾರವಾರದಲ್ಲಿ ಮಾಜಿ ಶಾಸಕಿ ರೂಪಾಲಿ ನಾಯ್ಕ ಪ್ರತಿಭಟನೆಯ ನೇತ್ರತ್ವವಹಿಸಿದ್ದರು. ಶಿರಸಿಯಲ್ಲಿ ನಡೆದ ಪ್ರತಿಭಟನೆಯಲ್ಲಿ ಜೀವಜಲ ಕಾರ್ಯಪಡೆ ಅಧ್ಯಕ್ಷ ಶ್ರೀನಿವಾಸ ಹೆಬ್ಬಾರ್ ಭಾಗವಹಿಸಿ ಮಾತನಾಡಿದರು. ಕುಮಟಾದಲ್ಲಿ ಶಾಸಕ ದಿನಕರ ಶೆಟ್ಟಿ ನೂರಾರು ಜನರೊಂದಿಗೆ ಆಗಮಿಸಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಯಲ್ಲಾಪುರದಲ್ಲಿ ಬಿಜೆಪಿ ರಾಜ್ಯ ವಕ್ತಾರ ಹರಿಪ್ರಕಾಶ ಕೋಣೆಮನೆ ಪ್ರತಿಭಟನೆಯ ಮುಖ್ಯ ಭಾಷಣ ಮಾಡಿದರು. ಜಿಲ್ಲೆಯ ಇನ್ನಿತರ ತಾಲೂಕುಗಳಲ್ಲಿ ಬಿಜೆಪಿ ಮಂಡಳ ಅಧ್ಯಕ್ಷರ ಮುಂದಾಳತ್ವದಲ್ಲಿ ಪ್ರತಿಭಟನೆ ನಡೆಯಿತು.
ಕಾರವಾರಲ್ಲಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ರೂಪಾಲಿ ನಾಯ್ಕ `ಮೂಡಾ, ವಾಲ್ಮಿಕಿ ಹಗರಣದಲ್ಲಿ ಕೋಟಿ ಕೋಟಿ ಹಣ ಲೂಟಿ ಹೊಡೆದ ಕಾಂಗ್ರೆಸ್ ಸರ್ಕಾರ ಇದೀಗ ರೈತರ ಭೂಮಿ ಮೇಲೆ ಕಣ್ಣಿಟ್ಟಿದೆ. ಸಿದ್ದರಾಮಯ್ಯ ಸರ್ಕಾರದ ಜಮೀರ್ ಅಹ್ಮದ್ ಖಾನ್ ಈ ಹಗರಣದ ರೂವಾರಿ. ಪ್ರತಿಯೊಬ್ಬ ರೈತರು ತಮ್ಮ ಪಹಣಿ ಪತ್ರಿಕೆ ಪರಿಕ್ಷಿಸಿಕೊಳ್ಳುವುದು ಒಳಿತು’ ಎಂದು ಕರೆ ನೀಡಿದರು. ಶಿರಸಿಯಲ್ಲಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಶ್ರೀನಿವಾಸ ಹೆಬ್ಬಾರ್ `ಹಿಂದೂತ್ವದ ವಿಷಯದಲ್ಲಿ ಎಲ್ಲರೂ ಒಂದಾಗಬೇಕು. ಭೂಮಿ ಜೊತೆ ಜನರ ತೆರಿಗೆ ಹಣವನ್ನು ವಕ್ಟ್’ಗೆ ನೀಡುವ ಸರ್ಕಾರದ ವಿರುದ್ಧ ಜನಾಂದೋಲನ ನಡೆಯಬೇಕು’ ಎಂದು ಕರೆ ನೀಡಿದರು.
ತಾಕತ್ತಿದ್ದರೆ ಜಮೀರ್ ಜಿಲ್ಲೆಗೆ ಬರಲಿ!
ಕುಮಟಾದಲ್ಲಿ ನೂರಾರು ಜನರೊಂದಿಗೆ ಪ್ರತಿಭಟನಾ ಮೆರವಣಿಗೆ ನಡೆದಿದ್ದು, ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಶಾಸಕ ದಿನಕರ ಶೆಟ್ಟಿ ಸಚಿವ ಜಮೀರ್ ಅಹ್ಮದ್ ಖಾನ್ ಅವರಿಗೆ ಬಹಿರಂಗ ಸವಾಲು ಹಾಕಿದರು. `ವಕ್ಟ್ ಸಚಿವ ಜಮೀರ್ ಅಹ್ಮದ್ ಎಲ್ಲಾ ಜಿಲ್ಲೆಗಳಿಗೆ ತೆರಳಿ ಅಧಿಕಾರಿಗಳ ಮೂಲಕ ಪಹಣಿ ತಿದ್ದುಪಡೆ ಮಾಡುತ್ತಿದ್ದಾರೆ. ಅವರಿಗೆ ತಾಕತ್ತು ಇದ್ದರೆ ನಮ್ಮ ಜಿಲ್ಲೆಗೆ ಕಾಲಿಡಲಿ, ನೋಡೋಣ’ ಎಂದು ತಮ್ಮ ಭಾಷಣದಲ್ಲಿ ಸವಾಲು ಹಾಕಿದರು.
ಯಲ್ಲಾಪುರದಲ್ಲಿ ನಡೆದ ಪ್ರತಿಭಟನೆಯಲ್ಲಿ ಬಿಜೆಪಿ ರಾಜ್ಯ ವಕ್ತಾರ ಹರಿಪ್ರಕಾಶ ಕೋಣೆಮನೆ ಮಾತನಾಡಿ `ರಾಜ್ಯ ಸರ್ಕಾರದ ಬಳಿ ಕುಡಿಯುವ ನೀರು, ರಸ್ತೆ ನಿರ್ವಹಣೆಗೆ ಹಣವಿಲ್ಲ. ಆದರೆ, ಸರ್ಕಾರಕ್ಕೆ ವಕ್ಟ್ಗೆ ಹಣ ನೀಡಲು ಅನುದಾನ ಕೊರತೆ ಉಂಟಾಗಿಲ್ಲ. ಪ್ರಸ್ತುತ ಉಪಚುನಾವಣೆ ಹಿನ್ನಲೆ ವಕ್ಟ ಹೆಸರಿಗೆ ದಾಖಲಾದ ಆಸ್ತಿಗಳನ್ನು ಹಿಂಪಡೆಯುವ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ’ ಎಂದು ದೂರಿದರು.
ಕಾರವಾರದಲ್ಲಿ ನಡೆದ ಪ್ರತಿಭಟನೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಎನ್ ಎಸ್ ಹೆಗಡೆ ಭಾಗವಹಿಸಿದ್ದರು. ಕಾರವಾರ ಮಂಡಳ ಅಧ್ಯಕ್ಷ ನಾಗೇಶ ಕುರ್ಡೇಕರ್, ಪ್ರಮುಖರಾದ ಮನೋಜ ಭಟ್ಟ, ಉದಯ ಬ ಶೆಟ್ಟಿ, ನಯನಾ ನೀಲಾವರ, ಸುಭಾಷ ಗುನಗಿ, ಸಂಜಯ ಸಾಳುಂಕೆ ಇತರರು ಭಾಗವಹಿಸಿದ್ದರು. ಯಲ್ಲಾಪುರದಲ್ಲಿ ನಡೆದ ಪ್ರತಿಭಟನೆಯಲ್ಲಿ ಬಿಜೆಪಿ ಮಂಡಳ ಅಧ್ಯಕ್ಷ ಪ್ರಸಾದ ಹೆಗಡೆ, ಪ್ರಮುಖರಾದ ವೆಂಕಟ್ರಮಣ ಬೆಳ್ಳಿ, ಜಿ ಎನ್ ಗಾಂವ್ಕರ, ರಾಮು ನಾಯ್ಕ, ಗೋಪಾಲಕೃಷ್ಣ ಹಂಡ್ರಮನೆ, ನಟರಾಜ ಗೌಡರ್ ಇತರರಿದ್ದರು. ಪ್ರತಿಭಟನೆ ನಡೆದ ಕಡೆ ಪೊಲೀಸ್ ಬಿಗಿ ಬಂದೋಬಸ್ತ ಕಾಣಿಸಿತು.




