ಜೊಯಿಡಾ: ಬಾಲಕನಿಗೆ ಬೈಕ್ ಓಡಿಸಲು ನೀಡಿದ್ದ ಪಾಲಕನಿಗೆ ನ್ಯಾಯಾಲಯ 25 ಸಾವಿರ ರೂ ದಂಡ ವಿಧಿಸಿದೆ.
20 ದಿನದ ಹಿಂದೆ ರಾಮನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಪ್ರಾಪ್ತನೊಬ್ಬ ಬೈಕ್ ಓಡಿಸುತ್ತಿರುವುದನ್ನು ಪೊಲೀಸರು ಪತ್ತೆ ಮಾಡಿದ್ದರು. ಪಿ ಎಸ್ ಐ ಬಸವರಾಜ್ ಮಬಕನೂರು ಬಾಲಕನನ್ನು ನಿಲ್ಲಿಸಿ ಬೈಕ್ ಓಡಿಸಲು ಪರವಾನಿಗೆ ಇದೆಯೇ? ಎಂದು ಪ್ರಶ್ನಿಸಿದ್ದರು. ಸಿಕ್ಕಿ ಬಿದ್ದವ 17 ವರ್ಷದವನಾಗಿದ್ದರಿಂದ ಆತನ ಬಳಿ ಲೈಸನ್ಸ ಇರಲಿಲ್ಲ. ಹೀಗಾಗಿ ಆ ಬೈಕ್ ನೊಂದಣಿ ಆಧಾರದ ಮೇಲೆ ಬೈಕಿನ ಮಾಲಕ ದಿಲೀಪ ದಶರಥ ದೇಸಾಯಿ ಎಂಬಾತರಿಗೆ ಪೊಲೀಸರು ನೋಟಿಸ್ ನೀಡಿದರು. ಜೊತೆಗೆ ಬಾಲಕನಿಗೆ ಬೈಕ್ ನೀಡಿದ ಕಾರಣ ಬೈಕ್ ಮಾಲಕನ ವಿರುದ್ಧ ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ್ದರು.
ಈ ಪ್ರಕರಣದ ವಿಚಾರಣೆ ನಡೆಸಿದ ದಾಂಡೇಲಿಯ ಜೆ ಎಂ ಎಫ್ ಸಿ ನ್ಯಾಯಾಧೀಶರು ದಿಲೀಪ ದಶರಥ ದೇಸಾಯಿ ಅವರನ್ನು ಕರೆಯಿಸಿ ಬುದ್ದಿ ಹೇಳಿದರು. ಮಕ್ಕಳ ಕೈಗೆ ವಾಹನ ನೀಡುವುದರಿಂದ ಆಗುವ ಅಪಘಾತಗಳ ಬಗ್ಗೆ ಅವರು ಮನವರಿಕೆ ಮಾಡಿದರು. ನಂತರ ಮಾಡಿದ ತಪ್ಪಿಗೆ 25 ಸಾವಿರ ರೂ ದಂಡ ಪಾವತಿಸುವಂತೆ ಸೂಚಿಸಿದ್ದು, ದಿಲೀಪ್ ದೇಸಾಯಿ ಸೋಮವಾರ ಅದನ್ನು ಪಾವತಿಸಿ ರಸೀದಿ ಪಡೆದರು.
`ಮಕ್ಕಳ ಕೈಗೆ ಬೈಕ್ ನೀಡಿ ಅನಾಹುತ ಮಾಡಿಕೊಳ್ಳದಿರಿ’