ಶಿರಸಿ: ಹುಬ್ಬಳ್ಳಿ ರಸ್ತೆ ಕಾಮಗಾರಿ ವೇಳೆಯಲ್ಲಿನ ಅವ್ಯವಸ್ಥೆ ಖಂಡಿಸಿ ಸಾರ್ವಜನಿಕರು ಆಕ್ಷೇಪ ವ್ಯಕ್ತಪಡಿಸಿದ್ದು, ಈ ವೇಳೆ ರಸ್ತೆ ನಿರ್ವಹಣೆ ಹೊಣೆ ಹೊತ್ತ ಗುತ್ತಿಗೆದಾರ ಉದ್ದಟತನ ಮೆರೆದಿದ್ದಾನೆ. ಇದರಿಂದ ಸಾರ್ವಜನಿಕರು ಆಕ್ರೋಶಗೊಂಡು ಆತನನ್ನು ತರಾಟೆಗೆ ತೆಗೆದುಕೊಂಡರು. ಜನರಿಗೆ ತೊಂದರೆ ಆಗದಂತೆ ಕೆಲಸ ನಿರ್ವಹಿಸುವಂತೆ ಸೂಚಿಸಿ, ಕಾಮಗಾರಿ ಸ್ಥಗಿತಗೊಳಿಸಿದರು.
ಚಿಪಗಿ ಬಳಿ ಸೋಮವಾರ ದೊಡ್ಡ ಯಂತ್ರಗಳ ಮೂಲಕ ಗುತ್ತಿಗೆದಾರ ರಸ್ತೆ ನಿರ್ವಹಣೆ ಕಾಮಗಾರಿ ನಡೆಸಲು ಆಗಮಿಸಿದ್ದು, ಇದರಿಂದ ಉಂಟಾದ ದೂಳಿನಿಂದ ಸಾರ್ವಜನಿಕರು ತೊಂದರೆ ಅನುಭವಿಸಿದರು. ದೂಳು ಬಾರದಂತೆ ನೀರು ಸಿಂಪಡಿಸಿ ಕೆಲಸ ನಿರ್ವಹಿಸುವಂತೆ ಸೂಚಿಸಿದರೂ ಅದಕ್ಕೆ ಗುತ್ತಿಗೆದಾರ ಸಿದ್ದವಿರಲಿಲ್ಲ. ರಸ್ತೆ ಹೊಂಡಕ್ಕೆ ಮಣ್ಣು ತುಂಬುವ ಬದಲು ಮುರು ಡಾಂಬರೀಕರಣ ನಡೆಸಬೇಕು ಎಂದು ಜನ ಪಟ್ಟು ಹಿಡಿದರು.
`ಪ್ಯಾಚ್‌ವರ್ಕ ಮಾಡಿದರೂ ಒಂದೇ ಮಳೆಗೆ ಅದು ಕಿತ್ತು ಹೋಗುತ್ತದೆ. ಹೊಂಡಕ್ಕೆ ಮಣ್ಣು ತುಂಬಿದರೆ ಆಗುವ ಅನುಕೂಲಕ್ಕಿಂತ ಅನಾನುಕೂಲವೇ ಹೆಚ್ಚು’ ಎಂದು ಜನ ವಾದಿಸಿದರು. `ರಸ್ತೆ ಹೊಂಡದ ಕಾರಣ ಪದೇ ಪದೇ ಇಲ್ಲಿ ಅಪಘಾತವಾಗುತ್ತಿದೆ. ದೂಳಿನಿಂದ ಅನೇಕರು ಆರೋಗ್ಯ ಹಾಳು ಮಾಡಿಕೊಂಡಿದ್ದಾರೆ’ ಎಂದು ವಿವರಿಸಿದರು.
ಕೆಲಸ ಮಾಡಲು ಬಂದ ಗುತ್ತಿಗೆದಾರ ಸಾರ್ವಜನಿಕರ ಜೊತೆ ಸೌಜನ್ಯದಿಂದ ವರ್ತಿಸದ ಕಾರಣ ಮಾತಿಗೆ ಮಾತು ಬೆಳೆಯಿತು. ಆಗ ಗುತ್ತಿಗೆದಾರ ಕೆಲಸ ನಿಲ್ಲಿಸುವ ಬೆದರಿಕೆ ಒಡ್ಡಿದ್ದು, ಜನರೇ ಕೆಲಸ ನಿಲ್ಲಿಸುವಂತೆ ತಾಕೀತು ಮಾಡಿದರು. `ರಸ್ತೆ ಕಾಮಗಾರಿ ಮೊದಲೇ ವಿಳಂಭವಾಗಿದೆ. ರಸ್ತೆ ಡಾಂಬರೀಕರಣ ಮಾಡುವುದಾದರೆ ಮಾತ್ರ ಕೆಲಸ ಮಾಡಿ’ ಎಂದು ನೆರೆದಿದ್ದವರು ಸೂಚಿಸಿದರು.