ಶಿರಸಿ: ಶಿರಸಿ ನಗರ ಸುತ್ತಲಿನ ಪ್ರದೇಶದಲ್ಲಿ ಶನಿವಾರ ರಾತ್ರಿಯಿಂದ ಭಾನುವಾರ ಸಂಜೆಯವರೆಗೆ ಕಾಡಾನೆಗಳ ಸಂಚಾರ ನಡೆದಿದ್ದು, ಸಂಜೆ ವೇಳೆಗೆ ಎಲ್ಲಾ ಆನೆಗಳು ಬನವಾಸಿ ಕಡೆ ಮುಖ ಮಾಡಿವೆ. ಹೀಗಾಗಿ ತಾತ್ಕಾಲಿಕವಾಗಿ ಅರಣ್ಯಾಧಿಕಾರಿಗಳು ನಿಟ್ಟುಸುರು ಬಿಟ್ಟಿದ್ದಾರೆ.
ಶನಿವಾರ ರಾತ್ರಿಯಿಂದ ಆನೆ ನಗರ ಪ್ರವೇಶಿಸದಂತೆ ತಡೆಯಲು ಅರಣ್ಯ ಸಿಬ್ಬಂದಿ ನಾನಾ ಬಗೆಯ ಕಸರತ್ತು ನಡೆಸಿದರು. ರಾತ್ರಿ ಬನವಾಸಿ ರಸ್ತೆಯ ಪೆಡಂಬೂಲ್ ಸಮೀಪದ ತೋಟಗಾರಿಕಾ ಕಾಲೇಜು ಸುತ್ತ ಸಂಚರಿಸಿದವು. ಅಲ್ಲಿನ ತವರುಮನೆ ತೋಟದಲ್ಲಿ ಕಾಡಾನೆ ಠಿಕಾಣಿ ಹೂಡಿದ್ದು, ರಾತ್ರಿಯಿಡಿ ಅರಣ್ಯ ಸಿಬ್ಬಂದಿ ಅಲ್ಲಿ ಕಾವಲು ಕಾದರು. ಸ್ವಲ್ಪ ದಿಕ್ಕು ಬದಲಿಸಿದರೂ ಆನೆಗಳು ನಗರ ಪ್ರವೇಶಿಸುವ ಆತಂಕವಿದ್ದ ಹಿನ್ನಲೆ ಕಟ್ಟೆಚ್ಚರವಹಿಸಲಾಗಿತ್ತು.
ಅದಾಗಿಯೂ ರಾತ್ರಿ ವೇಳೆ ಕಾಡಾನೆಯೊಂದು ನಗರದ ಕಡೆ ಮುಖ ಮಾಡಿತ್ತು. ಬನವಾಸಿ ರಸ್ತೆಯ ರೇಷ್ಮೆ ಇಲಾಖೆ ಅಕ್ಕ-ಪಕ್ಕದಲ್ಲಿ ಕಾಡಾನೆಗಳು ಸಂಚರಿಸಿದ್ದು, ಮನೆಯಿಂದ ಹೊರಬರದಂತೆ ಅರಣ್ಯ ಇಲಾಖೆಯವರು ಪದೇ ಪದೇ ಜನರಿಗೆ ಸೂಚನೆ ನೀಡುತ್ತಿದ್ದರು. ಬನವಾಸಿ ರಸ್ತೆಯ ಕಡೆ ವಾಕಿಂಗ್’ಗೆ ಸಹ ಬರಬೇಡಿ ಎಂದು ಅರಣ್ಯ ಸಿಬ್ಬಂದಿ ಕಟ್ಟಪ್ಪಣೆ ಹೊರಡಿಸಿದ್ದರು.
ರಾತ್ರಿ 2ಗಂಟೆಯ ಆಸುಪಾಸಿಗೆ ಆನೆ ಕುಳುವೆ ರಸ್ತೆ ಕಡೆ ಸಂಚರಿಸಿದ್ದು, ಆ ಮಾರ್ಗದಲ್ಲಿನ ವಾಹನ ಓಡಾಟಕ್ಕೆ ತಡೆ ಒಡ್ಡಲಾಯಿತು. ಜನರು ಸಹ ಆ ಕಡೆ ಹೋಗಬೇಡಿ ಎಂದು ಅರಣ್ಯ ಸಿಬ್ಬಂದಿ ಮನವಿ ಮಾಡುತ್ತಿದ್ದರು. ಬೆಳಗ್ಗೆ ಬಿಸಿಲು ಬಿದ್ದ ನಂತರ ಕಾಡಾನೆಗಳು ಶಿರಸಿ ನಗರದ ಅಂಬಾಗಿರಿ ಮೊಟಿನಸರ್ ಭಾಗದಲ್ಲಿ ಕಾಣಿಸಿಕೊಂಡವು. ತರಕನಳ್ಳಿ ಮೂಲಕ ಅದನ್ನು ಕಾಡಿಗೆ ಅಟ್ಟುವ ಪ್ರಯತ್ನ ಮುಂದುವರೆಯಿತು.
ಅAಬಾಗಿರಿ, ಗಾಂಧಿನಗರ, ರಾಮನಬೈಲ್, ಬನವಾಸಿ ರಸ್ತೆ, ತೋಟಗಾರಿಕಾ ಕಾಲೇಜು ಕಡೆ ಆನೆ ಸಂಚಾರ ಸಾಧ್ಯತೆ ಹೆಚ್ಚಿರುವುದರಿಂದ ಈ ಭಾಗದಲ್ಲಿ ಜನ ಓಡಾಟ ನಡೆಯದಂತೆ ಪೊಲೀಸರು ಎಚ್ಚರವಹಿಸಿದರು. ಅರಣ್ಯ ಸಿಬ್ಬಂದಿ ಸಹ ಕಾಡಿನಲ್ಲಿ ಗಸ್ತು ತಿರುಗಿ ಕಾಡಾನೆ ಹಾವಳಿ ಆಗದಂತೆ ತಡೆದರು.
ಭಾನುವಾರ ಸಂಜೆ 7 ಗಂಟೆ ಅವಧಿಗೆ ಕಾಡಾನೆಗಳ ಗುಂಪು ತೆರಕನಳ್ಳಿ ಕಾಡಿನ ಮೂಲಕ ಊರು ತೊರೆಯಿತು. ಕೆರೆಗೈ, ಗಡಳ್ಳಿ ಭಾಗಗಳಲ್ಲಿ ಸಂಚರಿಸಿ ಕಾಡು ಸೇರಿತು. ಅಲ್ಲಿಗೆ ಅರಣ್ಯ ಅಧಿಕಾರಿಗಳ ಜೊತೆ ಪೊಲೀಸರು ಸಹ ನಿಟ್ಟುಸುರು ಬಿಟ್ಟರು.
ಭಾನುವಾರ ಸಂಜೆ ಕಾಡಾನೆಗಳು ಸಾಲಿನಲ್ಲಿ ಕಾಡು ಸೇರಿದ ವಿಡಿಯೋ ಇಲ್ಲಿ ನೋಡಿ..