ಕಾರವಾರ: ಜಿಪಿಎಸ್ ಹಾಗೂ ಕ್ಯಾಮರಾ ಹೊಂದಿದ ರಣಹದ್ದು ಕೋಡಿಭಾಗದ ನದಿಭಾಗದಲ್ಲಿ ಭಾನುವಾರ ಹಾರಾಟ ನಡೆಸಿದೆ. ಮೂರು ದಿನದಿಂದ ಅದು ಕಾರವಾರ ಸುತ್ತಲು ಹಾರಾಡುತ್ತಿದೆ. ಈ ಹದ್ದು ಗೂಡಾಚಾರಿಕೆ ನಡೆಸಿದ ಅನುಮಾನದ ಹಿನ್ನಲೆ ಜನ ಆತಂಕಕ್ಕೆ ಒಳಗಾಗಿದ್ದು, ಅರಣ್ಯಾಧಿಕಾರಿಗಳು ಅದನ್ನು ಅಲ್ಲಗಳೆದಿದ್ದಾರೆ.
ನಗರದ ವಿವಿಧ ಭಾಗದಲ್ಲಿ ಭಾನುವಾರ ಈ ಹಕ್ಕಿ ಸಂಚಾರ ನಡೆಸಿತು. ಹಕ್ಕಿಯ ಕಾಲಿಗೆ ಇಲೆಕ್ಟ್ರಾನಿಕ್ ಚಿಪ್ ಅಳವಡಿಸಿದ್ದರಿಂದ ಜನ ಅನುಮಾನ ವ್ಯಕ್ತಪಡಿಸಿದರು. ಪಕ್ಷಿಯ ಎರಡೂ ಕಾಲುಗಳಿಗೆ ಬಣ್ಣದ ಸ್ಟಿಕರ್ ಅಳವಡಿಸಲಾಗಿದ್ದು, ಆಂಗ್ಲ ಭಾಷೆಯ ಅಕ್ಷರಗಳನ್ನು ಬರೆಯಲಾಗಿತ್ತು. ಕೆಲ ಸಂಖ್ಯೆಗಳು ಸಹ ಗೋಚರಿಸುತ್ತಿದ್ದವು. ಪಕ್ಷಿಯ ಬೆನ್ನ ಮೇಲೆ ಸೋಲಾರ್ ಪ್ಲೇಟ್ ರೀತಿ ಕಾಣುವ ಚಿಪ್ ಇರುವುದರಿಂದ ಜನ ಗೊಂದಲಜಕ್ಕೆ ಒಳಗಾಗಿದ್ದರು.
ಇನ್ನೂ ಈ ಭಾಗದಲ್ಲಿ ಕೈಗಾ ಅಣು ವಿದ್ಯುತ್ ಕೇಂದ್ರ, ಕದಂಬ ನೌಕಾನೆಲೆ ಸೇರಿ ಹಲವು ಯೋಜನೆಗಳು ಇರುವುದರಿಂದ ರಹಸ್ಯ ಕಾರ್ಯಾಚರಣೆಯ ಬಗ್ಗೆ ಕೆಲವರು ಕಳವಳ ವ್ಯಕ್ತಪಡಿಸಿದರು. ಜನರ ದೂರಿನ ಅನ್ವಯ ಅಧಿಕಾರಿಗಳು ಹಕ್ಕಿ ಪರಿಶೀಲನೆ ನಡೆಸಿದರು. ಜಿಪಿಎಸ್ ಟ್ರ‍್ಯಾಕರ್ ಮೇಲೆ ಮಹಾರಾಷ್ಟ್ರ ಅರಣ್ಯ ಇಲಾಖೆಯ ಹೆಸರು ಕಾಣಿಸಿದ್ದು, ಮಹಾರಾಷ್ಟ್ರ ಅರಣ್ಯ ಇಲಾಖೆಯಿಂದ ಸಂಶೋಧನೆಗೆ ಒಳಪಟ್ಟಿದ್ದ ಈ ರಣಹದ್ದು ಚಳಿಗಾಲದಲ್ಲಿ ವಲಸೆ ಬಂದಿದೆ ಎಂಬ ಮಾಹಿತಿ ನೀಡಿದರು.
`ಮಹಾರಾಷ್ಟ್ರದ ತಡೋಬಾ ರಾಷ್ಟ್ರೀಯ ಉದ್ಯಾನವನದಲ್ಲಿ ಬಾಂಬೆ ನ್ಯಾಚ್ಯುರಲ್ ಹಿಸ್ಟರಿ ಆಫ್ ಸೊಸೈಟಿಯಿಂದ ಸಂಶೋಧನೆ ನಡೆಯುತ್ತಿದೆ. 5 ರಣಹದ್ದಿಗೆ ಟ್ಯಾಗಿಂಗ್ ಮಾಡಿ ಸಂತಾನೋತ್ಪತ್ತಿ ಬಳಿಕ ಬಿಡುಗಡೆ ಮಾಡಿದ್ದಾರೆ. ಅದರಲ್ಲಿ ಒಂದು ಇಲ್ಲಿಗೆ ಬಂದಿದೆ. ಯಾವುದೇ ಗೂಡಾಚಾರಿಕೆ ಅಲ್ಲ’ ಎಂದು ಡಿಎಫ್‌ಒ ರವಿಶಂಕರ್ ಸ್ಪಷ್ಠಪಡಿಸಿದ್ದಾರೆ.