ಶಿರಸಿ – ಕುಮಟಾ ರಸ್ತೆಯನ್ನು ಅಕ್ಟೊಬರ್ 15ರಿಂದ ಸಂಪೂರ್ಣವಾಗಿ ಬಂದ್ ಮಾಡಲು ಹಿಂದಿನ ಜಿಲ್ಲಾಧಿಕಾರಿ ಗಂಗುಬಾಯಿ ಮಾನೇಕರ್ ಅವರು ಆದೇಶ ನೀಡಿದ್ದು, ನವೆಂಬರ್ 15ರ ನಂತರ ಬಂದ್ ಮಾಡುವ ಸಾಧ್ಯತೆಗಳಿವೆ.
`ಅಭಿವೃದ್ಧಿ ಕಾಮಗಾರಿಗಾಗಿ ರಸ್ತೆ ಬಂದ್ ಮಾಡಬೇಕು’ ಎಂದು ಗುತ್ತಿಗೆದಾರರು ಹೆದ್ದಾರಿ ಪ್ರಾಧಿಕಾರದವರ ಬಳಿ ಹೇಳಿದ್ದಾರೆ. `ಈ ಬಗ್ಗೆ ಪತ್ರ ವ್ಯವಹಾರ ನಡೆಸಲಾಗುತ್ತಿದೆ’ ಎಂದು ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರದ ಪ್ರೊಜೆಕ್ಟ ಡೈರೆಕ್ಟರ್ ಶಿವಕುಮಾರ್ S News Digital’ಗೆ ಮಾಹಿತಿ ನೀಡಿದರು.
2024ರ ಅಕ್ಟೊಬರ್ 15ರಿಂದ 2025ರ ಫೆಬ್ರವರಿ 25ರವರೆಗೆ ಈ ರಸ್ತೆ ಸಂಚಾರ ನಿಷೇಧಿಸಲು ಹೆದ್ದಾರಿ ಪ್ರಾಧಿಕಾರಕ್ಕೆ ಜಿಲ್ಲಾಡಳಿತ ಅನುಮತಿ ನೀಡಿದೆ. ಆದರೆ, ಮಳೆಗಾಲದ ಕಾರಣ ಅಕ್ಟೊಬರ್ ತಿಂಗಳಿನಲ್ಲಿ ಹೆದ್ದಾರಿ ಕೆಲಸ ಶುರುವಾಗಿರಲಿಲ್ಲ. ಹೀಗಾಗಿ ಈ ಆದೇಶದ ಪ್ರಕಾರ ಹೆದ್ದಾರಿ ಬಂದ್ ಮಾಡಿರಲಿಲ್ಲ. ಆ ವೇಳೆ ಜಿಲ್ಲಾಡಳಿತ ಆದೇಶ ಸಹ ಹಿಂಪಡೆದಿರಲಿಲ್ಲ. ಹೀಗಾಗಿ ಪ್ರಸ್ತುತ ಹೆದ್ದಾರಿ ಬಂದ್ ಮಾಡುವ ಅಧಿಕಾರ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಬಳಿಯಿದ್ದು, ನ 15ರ ನಂತರ ಬಂದ್ ಮಾಡುವ ಸಾಧ್ಯತೆ ಹೆಚ್ಚಿದೆ.
`ಹೆದ್ದಾರಿ ಅಭಿವೃದ್ಧಿಯ ಭಾಗವಾಗಿ ಹೊಸ ಸೇತುವೆ ನಿರ್ಮಿಸಬೇಕು. ಹೀಗಾಗಿ ಈಗಿನ ಸೇತುವೆಗಳನ್ನು ಸಂಪೂರ್ಣವಾಗಿ ನೆಲಸಮ ಮಾಡಲಾಗುತ್ತದೆ. ಆಗ ವಾಹನ ಓಡಾಟ ಅಸಾಧ್ಯ. ಹೀಗಾಗಿ ಹೆದ್ದಾರಿ ಬಂದ್ ಮಾಡುವುದು ಅನಿವಾರ್ಯ’ ಎಂದು ಪ್ರೋಜೆಕ್ಟ ಡೈರೆಕ್ಟರ್ ಶಿವಕುಮಾರ್ ವಿವರಿಸಿದರು. `ಗುತ್ತಿಗೆದಾರರು ನ 15ರಿಂದ ಸಂಚಾರ ಬಂದ್ ಮಾಡುವಂತೆ ಮೌಖಿಕವಾಗಿ ತಿಳಿಸಿದ್ದಾರೆ. 2025ರ 25ರವರೆಗೆ ಸಂಚಾರ ಬಂದ್ ಮಾಡುವಂತೆ ಅವರು ಕೋರಿದ್ದು, 2025ರ ಫೆ 25ರವರೆಗೆ ಮಾತ್ರ ಸಂಚಾರ ಸ್ಥಗಿತಕ್ಕೆ ಅನುಮತಿಯಿದೆ. ಅವರು ಅಧಿಕೃತ ಪತ್ರ ನೀಡಿದ ನಂತರ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಈ ಬಗ್ಗೆ ನಿರ್ಣಯಿಸಲಾಗುತ್ತದೆ’ ಎಂದವರು ಹೇಳಿದರು.
ಸಂಚಾರ ತಡೆಗೆ ವಿರೋಧ:
`ಕುಮಟಾ-ಶಿರಸಿ ರಾಷ್ಟೀಯ ಹೆದ್ದಾರಿ ಕಾಮಗಾರಿ ನಡೆಸಲು ರಸ್ತೆ ಬಂದ್ ಮಾಡಿದರೆ ಜನರಿಗೆ ಆಗಿವ ತೊಂದರೆಯ ಜವಾಬ್ದಾರಿಯನ್ನು ಸಂಸದರು ಹೊರಬೇಕು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಹೇಳಿರುವುದನ್ನು ಸಾಮಾಜಿಕ ಕಾರ್ಯಕರ್ತ ನಾಗರಾಜ ಶೇಟ್ ಖಂಡಿಸಿದ್ದಾರೆ. ಇದರೊಂದಿಗೆ ಅನೇಕ ಸಾಮಾಜಿಕ ಕಾರ್ಯಕರ್ತರು ಸಂಚಾರವನ್ನು ಸಂಪೂರ್ಣವಾಗಿ ಬಂದ್ ಮಾಡುವುದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ.




