ಶಾಸಕ ಶಿವರಾಮ ಹೆಬ್ಬಾರ್ ತಮ್ಮ ಪತ್ನಿ ಹೆಸರಿನಲ್ಲಿ ಸಹಕಾರಿ ಬ್ಯಾಂಕ್ ಸ್ಥಾಪಿಸಿದ್ದಾರೆ. ಮಾಜಿ ಸಂಸದ ಅನಂತಕುಮಾರ ಹೆಗಡೆ ಸಹ ತಮ್ಮ ಪತ್ನಿ ಒಡೆತನದಲ್ಲಿ ಸಹಕಾರಿ ಬ್ಯಾಂಕ್ ಸ್ಥಾಪಿಸಿದ್ದಾರೆ. ಶಿರಸಿಯಲ್ಲಿ ನಡೆದ ಬ್ಯಾಂಕ್ ಉದ್ಘಾಟನಾ ಸಮಾರಂಭದಲ್ಲಿ ಶಾಸಕ ಶಿವರಾಮ ಹೆಬ್ಬಾರ್ ಹಾಗೂ ಮಾಜಿ ಸಂಸದ ಅನಂತಕುಮಾರ ಹೆಗಡೆ ಮುಖಾಮುಖಿಯಾದರು!
ಬಿಜೆಪಿಯಿಂದ ಮಾನಸಿಕವಾಗಿ ದೂರವಾಗಿರುವ ಶಾಸಕ ಶಿವರಾಮ ಹೆಬ್ಬಾರ್ ಹಾಗೂ ಮಾಜಿ ಸಂಸದ ಅನಂತಕುಮಾರ ಹೆಗಡೆ ಇಲ್ಲಿ ಒಟ್ಟಿಗೆ ಮಾತುಕತೆ ನಡೆಸಿದ್ದಾರೆ. ಅವರಿಬ್ಬರು ಏನು ಮಾತನಾಡಿದರು? ಎಂಬ ಬಗ್ಗೆ ಬಿಜೆಪಿಗರ ಜೊತೆ ಕಾಂಗ್ರೆಸ್ಸಿಗರಲ್ಲಿ ಸಹ ಚರ್ಚೆ ನಡೆಯುತ್ತಿದೆ.
ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಶಿವರಾಮ ಹೆಬ್ಬಾರ್ ಬಿಜೆಪಿಯಿಂದ ದೂರವಾಗಿದ್ದಾರೆ. ಅವರ ಪುತ್ರ ವಿವೇಕ್ ಹೆಬ್ಬಾರ್ ಈಗಾಗಲೇ ಕಾಂಗ್ರೆಸ್ ಸೇರಿದ್ದಾರೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅನಂತಕುಮಾರ ಹೆಗಡೆ ಅವರಿಗೆ ಬಿಜೆಪಿ ಟಿಕೆಟ್ ನಿರಾಕರಿಸಿದ ಕಾರಣ ಅವರು ಪಕ್ಷದ ಚಟುವಟಿಕೆಗಳಲ್ಲಿ ಸಕ್ರಿಯವಾಗಿಲ್ಲ.
ಅದರ ನಡುವೆ ಗುರುವಾರ ಶಿರಸಿಯಲ್ಲಿ ನಡೆದ ದುರ್ಗಾದೇವಿ ಸಹಕಾರಿ ಬ್ಯಾಂಕಿನ ಶಾಖೆಯ ಉದ್ಘಾಟನೆಗೆ ಶಿವರಾಮ ಹೆಬ್ಬಾರ್ ಆಗಮಿಸಿದ್ದರು. ಅಲ್ಲಿ ಅನಂತಕುಮಾರ ಹೆಗಡೆ ಸಹ ಇದ್ದರು. ಅನಂತಕುಮಾರ ಹೆಗಡೆ ಮಾಲಿಕತ್ವದ ಸಹಕಾರಿ ಬ್ಯಾಂಕ್ ಇದಾಗಿದ್ದು, ಕೆಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿರುವ ಶಿವರಾಮ ಹೆಬ್ಬಾರ್ ಅದರಲ್ಲಿ ಉತ್ಸಾಹದಿಂದಲೇ ಭಾಗಿಯಾಗಿದ್ದರು. ಅನಂತಕುಮಾರ ಹೆಗಡೆ ಹಾಗೂ ಶಿವರಾಮ ಹೆಬ್ಬಾರ್ ಸಾಕಷ್ಟು ಕಾಲ ಒಟ್ಟಿಗೆ ಮಾತನಾಡಿದ್ದು, ಶಿವರಾಮ ಹೆಬ್ಬಾರ್ ಅವರೇ ಈ ಫೋಟೋವನ್ನು ತಮ್ಮ ಸಾಮಾಜಿಕ ತಾಣದಲ್ಲಿ ಹಂಚಿಕೊoಡಿದ್ದಾರೆ.
ಇನ್ನೂ ಈಗ ಶಿರಸಿಯಲ್ಲಿ ಶಾಖೆ ಆರಂಭಿಸಿರುವ ದುರ್ಗಾದೇವಿ ಕೋ ಆಪರೇಟಿವ್ ಬ್ಯಾಂಕ್ ಕಾರವಾರದ ಮಾಜಿ ಶಾಸಕ ಆನಂದ ಅಸ್ನೋಟಿಕರ ತಾಯಿ ಶುಭಲತಾ ಅಸ್ನೋಟಿಕರ ಅವರ ಒಡೆತನಕ್ಕೆ ಸೇರಿತ್ತು. ಇದೀಗ ಅದರ ಪರವಾನಿಗೆಯನ್ನು ಅನಂತಕುಮಾರ್ ಅವರ ಕುಟುಂಬಕ್ಕೆ ಆನಂದ ಅಸ್ನೋಟಿಕರ್ ವರ್ಗಾಯಿಸಿಕೊಟ್ಟಿದ್ದಾರೆ. ಹೀಗಾಗಿ ಅನಂತಕುಮಾರ ಅವರ ಕದಂಬ ಸಂಸ್ಥೆಯ ಅಡಿಯಲ್ಲಿಯೇ ಈ ಬ್ಯಾಂಕ್ ಆರಂಭವಾಗಿದೆ.