ಯಲ್ಲಾಪುರ: ವನ್ಯಜೀವಿ ಆಕ್ರಮಣ, ಸೊಪ್ಪಿನ ಬೆಟ್ಟದ ಬಳಕೆಗೆ ವಿಘ್ನ, ಅಧಿಕಾರಿಗಳ ಅಸಡ್ಡೆ, ಬೆಳೆಗಾರರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳನ್ನು ಖಂಡಿಸಿ ರೈತರ ಹಕ್ಕುಗಳ ಸಂರಕ್ಷಣಾ ಸಮಿತಿ ನ.20ರಂದು ಪ್ರತಿಭಟನೆ ನಡೆಸಲಿದೆ. ಅಂದು ಬೆಳಗ್ಗೆ 9.30 ಯಲ್ಲಾಪುರ ಉಪ ಅರಣ್ಯ ಸಂರಕ್ಷಣಾಧಿಕಾರಿ ಕಚೇರಿ ಮುಂದೆ ಸಭೆ ಸೇರಲಿರುವ ರೈತರು ಜಾಗೃತಿ ಜಾಥಾ ನಡೆಸಿ ಸಂಚಾರ ತಡೆ ನಡೆಸುವ ಮೂಲಕ `ನಮ್ಮ ಹಕ್ಕುಗಳನ್ನು ತಮಗೆ ಕೊಡಿ’ ಎಂಬ ಬೇಡಿಕೆ ಮುಂದಿಡಲಿದ್ದಾರೆ.
`ಅಡಿಕೆ ಬೆಳೆಗಾರರು ನಾನಾ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಬ್ರಿಟೀಷರು ನೀಡಿದ ಸೊಪ್ಪಿನ ಬೆಟ್ಟ ಹಕ್ಕುಗಳ ಬಳಕೆಗೆ ಅಧಿಕಾರಿಗಳು ಅನಗತ್ಯ ತೊಂದರೆ ನೀಡುತ್ತಿದ್ದಾರೆ. ಸೊಪ್ಪಿನ ಬೆಟ್ಟದಲ್ಲಿ ಅಧಿಕೃತ ಮನೆ ನಿರ್ಮಾಣ, ತೋಟ ವಿಸ್ತರಣೆ, ಬೇಲಿ ಅಳವಡಿಸುವಿಕೆ, ಕಂದಕಗಳ ನಿರ್ಮಾಣಕ್ಕೆ ರೈತರಿಗೆ ಹಕ್ಕುಗಳಿದ್ದರೂ ಅವುಗಳ ಬಳಕೆಗೆ ಅವಕಾಶ ಕೊಡುತ್ತಿಲ್ಲ. ಈ ಬಗ್ಗೆ ಜನರಲ್ಲಿ ಅರಿವು ಮೂಡಿಸುವುದರೊಂದಿಗೆ ಅಧಿಕಾರಿಗಳು ಮನವರಿಕೆ ಮಾಡುವ ಉದ್ದೇಶದಿಂದ ಪ್ರತಿಭಟನೆ-ಜಾಥಾವನ್ನು ಪ್ರಾರಂಭಿಸಲಾಗಿದೆ’ ಎಂದು ನ್ಯಾಯವಾದಿ ಆರ್ ಕೆ ಭಟ್ಟ ಸುದ್ದಿಗಾರರಿಗೆ ವಿವರಿಸಿದರು.
ಕೆಂಪು ಮುಸುಡಿ ಮಂಗನ ದಾಳಿಗೆ ಇಲ್ಲ ಪರಿಹಾರ!
`ಮಲೆನಾಡಿನ ತೋಟಗಳಲ್ಲಿ ವನ್ಯಜೀವಿಗಳ ಹಾವಳಿ ಹೆಚ್ಚಾಗುತ್ತಿದೆ. ಈಚೆಗೆ ಕಾಡುಪ್ರಾಣಿಗಳು ರೈತರ ಮೇಲೆ ದಾಳಿ ನಡೆಸುತ್ತಿದೆ. ಈ ಬಗ್ಗೆ ಅರಣ್ಯ ಇಲಾಖೆಗೆ ಅರಿವಿದ್ದರೂ ಯಾವುದೇ ಕ್ರಮ ಜರುಗಿಸುತ್ತಿಲ್ಲ’ ಎಂದು ದೂರಿದರು.
‘ಮಂಗ, ನವಿಲು, ಕಾಡು ಇಲಿ, ಹಂದಿ, ಅಳಿಲು, ಚಿರತೆ ಹಾವಳಿಯಿಂದ ರೈತರು ತತ್ತರಿಸಿದ್ದಾರೆ. ಮಂಗನಿಂದ ಆಗುವ ಬೆಳೆಹಾನಿ ಕುರಿತು ಅರಣ್ಯ ಇಲಾಖೆಗೆ ಅರ್ಜಿ ಸಲ್ಲಿಸಿದರೆ ಕಪ್ಪು ಮಂಗನ ಹಾನಿಗೆ ಮೂರು ಕಾಸಿನ ಪರಿಹಾರ ನೀಡಲಾಗುತ್ತಿದ್ದು, ಕೆಂಪು ಮಂಗನ ಹಾವಳಿಗೆ ಪರಿಹಾರ ನೀಡಲು ಕಾನೂನಿನಲ್ಲಿ ಅವಕಾಶವಿಲ್ಲ ಎನ್ನುತ್ತಿದ್ದಾರೆ. ಬಯಲು ಸೀಮೆ ಭಾಗದಿಂದ ಕೆಂಪು ಮುಸುಕಿನ ಮಂಗಗಳನ್ನು ಇಲ್ಲಿ ತಂದು ಬಿಡುತ್ತಿರುವುದು ಸಮಸ್ಯೆಯಾಗಿದೆ’ ಎಂದು ಹೇಳಿದರು.
`ಸೊಪ್ಪಿನ ಬೆಟ್ಟದ ಹಕ್ಕುಗಳ ಬಗ್ಗೆ ರೈತರಲ್ಲಿ ಅರಿವು ಮೂಡಿಸುವುದರೊಂದಿಗೆ ಜೆಸಿಬಿ ಸೇರಿ ವಿವಿಧ ಯಂತ್ರಗಳ ಬಳಕೆ ವೇಳೆ ಅಧಿಕಾರಿಗಳು ನಡೆಸುವ ದೌರ್ಜನ್ಯದ ವಿರುದ್ಧ ಜನಾಂದೋಲನ ನಡೆಸುವುದು ಈ ಹೋರಾಟದ ಮುಖ್ಯ ಉದ್ದೇಶ. ಸೆ 24ರಂದು ಅರಣ್ಯಾಧಿಕಾರಿಗಳ ಕಚೇರಿ ಮುಂದೆ ಸಭೆ ಸೇರಿದಾಗ ನೀಡಿದ ಭರವಸೆಗಳು ಈಡೇರದ ಕಾರಣ ಮುಂದಿನ ಹೋರಾಟಕ್ಕೆ ನಿರ್ಣಯ ಕೈಗೊಳ್ಳಲಾಗಿದೆ. ಹೆಚ್ಚಿನ ರೈತರು ಈ ಹೋರಾಟದಲ್ಲಿ ಭಾಗವಹಿಸಬೇಕು’ ಎಂದು ಕರೆ ನೀಡಿದರು.
ಸಮಿತಿ ಪ್ರಮುಖರಾದ ಕೆ ಟಿ ಭಟ್ಟ ಗುಂಡ್ಕಲ್, ಸಿಟಿ ಹೆಗಡೆ ಗೋಳಿಗದ್ದೆ, ಗಣಪತಿ ಕರುಮನೆ, ವಿ ಎಂ ಹೆಗಡೆ ಜಾಲಿಮನೆ, ನಾಗೇಂದ್ರ ಭಟ್ಟ ಲಿಂಗಭಟ್ರಮನೆ, ಕಾವ್ಯ ಭಟ್ಟ ಇದ್ದರು.