ಯಲ್ಲಾಪುರ: ಸಾಮರ್ಥ್ಯಕ್ಕಿಂತಲೂ ಅಧಿಕ ಬಾರದ ಮರಳನ್ನು ರಾಷ್ಟ್ರೀಯ ಹೆದ್ದಾರಿಯಲ್ಲಿ ರಾಜಾರೋಷವಾಗಿ ಸಾಗಿಸುತ್ತಿದ್ದ ಲಾರಿಯನ್ನು ಪೊಲೀಸರು ಜಪ್ತು ಮಾಡಿದ್ದಾರೆ.
ನ 16ರ ಸಂಜೆ ಸಬಗೇರಿ ಸಂಕಲ್ಪದ ಬಳಿ ಪಿಎಸ್‌ಐ ಸಿದ್ದಪ್ಪ ಗುಡಿ ಹಾಗೂ ಪೊಲೀಸ್ ಸಿಬ್ಬಂದಿ ಕೃಷ್ಣ ಮಾತ್ರೋಜಿ ಜೊತೆಯಾಗಿ ವಾಹನಗಳ ತಪಾಸಣೆ ನಡೆಸುತ್ತಿದ್ದರು. ಆಗ, ಲಾರಿ ಚಾಲಕನೊಬ್ಬ ಅನುಮಾನಾಸ್ಪದವಾಗಿ ವರ್ತಿಸಿದ್ದು ಆತನನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದರು. `ಲಾರಿಯಲ್ಲಿ ಏನಿದೆ?’ ಎಂದು ಪ್ರಶ್ನಿಸಿದಾಗ ಆತ ಸರಿಯಾಗಿ ಉತ್ತರಿಸಲಿಲ್ಲ.
ಲಾರಿಯನ್ನು ತಪಾಸಣೆ ನಡೆಸಿದಾಗ ಸಾಮರ್ಥ್ಯಕ್ಕಿಂತಲೂ ಅಧಿಕ ಬಾರದ ಮರಳು ಸಾಗಾಟವಾಗುತ್ತಿತ್ತು. ಇದರಿಂದ ರಸ್ತೆ ಹಾಳಾಗುವ ಬಗ್ಗೆ ಅರಿವಿದ್ದರೂ ಚಾಲಕ ಆ ಬಗ್ಗೆ ತಲೆಕೆಡಿಸಿಕೊಂಡಿರಲಿಲ್ಲ. ಜೊತೆಗೆ ಮರಳು ಸಾಗಾಟಕ್ಕೆ ಅನುಮತಿಯನ್ನು ಪಡೆದಿರಲಿಲ್ಲ. ಮರಳನ್ನು ಆತ ಕಳ್ಳತನ ಮಾಡಿಕೊಂಡು ಬಂದಿದ್ದು, ಸರ್ಕಾರಕ್ಕೆ ಸಹ ಇದರಿಂದ ನಷ್ಟವಾಗಿತ್ತು. `ಮರಳು ಎಲ್ಲಿಂದ ತಂದೆ?’ ಎಂಬ ಪ್ರಶ್ನೆಗೂ ಆತ ಉತ್ತರಿಸಲಿಲ್ಲ.
ಈ ಎಲ್ಲಾ ಹಿನ್ನಲೆ ಪುತ್ತೂರಿನ ಮನೋಜ ಪೂಜಾರಿ ಎಂಬ ಲಾರಿ ಚಾಲಕನನ್ನು ವಶಕ್ಕೆ ಪಡೆದ ಪೊಲೀಸರು ಆತನ ಲಾರಿಯಲ್ಲಿದ್ದ 6 ಬರಾಸ್ ಮರಳಿನ ಜೊತೆ ಲಾರಿಯನ್ನು ಜಪ್ತು ಮಾಡಿದರು. ಅಕ್ರಮ ಮರಳು ಸಾಗಾಟದ ಪ್ರಕರಣವನ್ನು ದಾಖಲಿಸಿದರು.




