ಕುಮಟಾ: ಬಸ್ ಡಿಪೋದಲ್ಲಿ ನಿಲ್ಲಿಸಿದ್ದ ಸಾರ್ವಜನಿಕ ಬಸ್ಸು ಬೆಂಕಿಗೆ ಆಹುತಿಯಾಗಿದೆ. ಬಸ್ಸಿನ ಅಗ್ನಿಸ್ಪರ್ಶಕ್ಕೆ ಈವರೆಗೂ ಕಾರಣ ಗೊತ್ತಾಗಿಲ್ಲ.
ರವಿವಾರ ಸಂಜೆ ಸಂಚಾರ ಮುಗಿಸಿ ಡಿಪೋ ಸೇರಿದ ಬಸ್ಸು ಅಲ್ಲಿ ವಿಶ್ರಾಂತಿ ಪಡೆಯುತ್ತಿತ್ತು. ಬಸ್ಸು ಚಾಲಕ ಸಹ ಬಸ್ಸಿನ ಬಾಗಿಲು-ಕಿಟಕಿ ಬಂದ್ ಮಾಡಿ ಮನೆಗೆ ಹೋಗಿದ್ದರು. ಸೋಮವಾರ ನಸುಕಿನ 2 ಗಂಟೆ ವೇಳೆಗೆ ಬಸ್ ಡಿಪೋದಲ್ಲಿ ಬೆಂಕಿಯ ಜ್ವಾಲೆ ಕಾಣಿಸಿದೆ. ಇಡೀ ಬಸ್ಸು ಹೊತ್ತಿ ಉರಿದಿದೆ.
ಬಸ್ ಡಿಪೋದಲ್ಲಿದ್ದ ಮೆಕಾನಿಕ್ ಬಸ್ಸು ಉರಿಯುತ್ತಿರುವುದನ್ನು ಗಮನಿಸಿ ಅಗ್ನಿಶಾಮಕ ಸಿಬ್ಬಂದಿಗೆ ಫೋನ್ ಮಾಡಿದರು. ಈ ವೇಳೆಗೆ ಪೊಲೀಸರು ಸಹ ಸ್ಥಳಕ್ಕೆ ಬಂದರು. ಅಗ್ನಿಶಾಮಕ ಸಿಬ್ಬಂದಿ ಬೆಂಕಿ ಆರಿಸುವ ಪ್ರಯತ್ನ ನಡೆಸಿದರೂ ಬಸ್ಸು ಸುಟ್ಟು ಕರಕಲಾಗಿತ್ತು. ಬಸ್ಸಿಗೆ ಬೆಂಕಿ ಬೀಳಲು ಕಾರಣವೇನು? ಎಂಬ ಬಗ್ಗೆ ತನಿಖೆ ನಡೆಯುತ್ತಿದೆ.





