ಯಲ್ಲಾಪುರ: ಬೈಕಿಗೆ ಲಾರಿ ಗುದ್ದಿ ಇಬ್ಬರ ಸಾವಿಗೆ ಕಾರಣನಾದ ಲಾರಿ ಚಾಲಕನಿಗೆ ನ್ಯಾಯಾಲಯ ಒಂದು ವರ್ಷ ಜೈಲು ಹಾಗೂ 5 ಸಾವಿರ ರೂ ದಂಡ ವಿಧಿಸಿ ಶಿಕ್ಷೆ ಪ್ರಕಟಿಸಿದೆ.
2022ರ ಮೇ 3ರಂದು ಹುಬ್ಬಳ್ಳಿ-ಅಂಕೋಲಾ ರಾಷ್ಟ್ರೀಯ ಹೆದ್ದಾರಿ ಮೇಲಿನ ಖಾರೆವಾಡ ಕ್ರಾಸಿನ ಬಳಿ ಅಪಘಾತ ನಡೆದಿತ್ತು. ಹುಬ್ಬಳ್ಳಿ ಕಡೆಯಿಂದ ಯಲ್ಲಾಪುರ ಕಡೆ ಬೈಕಿನಲ್ಲಿ ಬರುತ್ತಿದ್ದ ಲಕ್ಷ್ಮಣ ಹಾಗೂ ಮಹಾದೇವಿ ಎಂಬಾತರಿಗೆ ಲಾರಿ ಗುದ್ದಿತ್ತು. ಪರಿಣಾಮ ಈ ದಂಪತಿ ಸ್ಥಳದಲ್ಲಿಯೇ ಸಾವನಪ್ಪಿದ್ದರು. ಲಾರಿ ಚಾಲಕ ಸಚಿನ ಬಾಳು ಕಚರೆ ಎಂಬಾತನ ಅತಿವೇಗ ಈ ಅವಘಡಕ್ಕೆ ಕಾರಣವಾಗಿತ್ತು.
ಅಪಘಾತದ ನಂತರ ಲಾರಿ ಚಾಲಕ ಗಾಯಗೊಂಡವರನ್ನು ಉಪಚರಿಸಿರಲಿಲ್ಲ. ಅವರನ್ನು ಆಸ್ಪತ್ರೆಗೆ ಸಾಗಿಸುವ ಪ್ರಯತ್ನವನ್ನು ಮಾಡಿರಲಿಲ್ಲ. ಪೊಲೀಸ್ ಠಾಣೆಗೆ ಸಹ ಅಪಘಾತದ ಬಗ್ಗೆ ಮಾಹಿತಿ ನೀಡಿರಲಿಲ್ಲ. ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ಈ ಪಘಾತದಲ್ಲಿ ಎರಡು ವಾಹನ ಜಖಂ ಆದ ಬಗ್ಗೆಯೂ ಪೊಲೀಸರು ಉಲ್ಲೇಖಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶೆ ವಾದ ಆಲಿಸಿದರು. ಸರ್ಕಾರಿ ಅಭಿಯೋಜಕಿ ಝೀನತಭಾನು ಇಬ್ರಾಹಿಂಸಾಬ್ ಶೇಖ್ ಆರೋಪಿ ಲಾರಿ ಚಾಲಕನಿಗೆ ಕಠಿಣ ಶಿಕ್ಷೆ ವಿಧಿಸುವಂತೆ ವಾದಿಸಿದರು. ನ್ಯಾಯಾಧೀಶೆ ಲಕ್ಷ್ಮೀಬಾಯಿ ಬಸನಗೌಡ ಪಾಟೀಲ ಅವರು ಲಾರಿ ಚಾಲಕ ಸಚಿನ್ ಬಾಳು ಕಚರೆಗೆ 1 ವರ್ಷ ಜೈಲು ಹಾಗೂ 5 ಸಾವಿರ ರೂ ದಂಡ ವಿಧಿಸಿ ಆದೇಶ ಹೊರಡಿಸಿದರು.