ಶಿರಸಿ: ಶನಿವಾರ ಒಂದೇ ದಿನ ಶಿರಸಿಯಲ್ಲಿ ಎರಡು ಶಿಕ್ಷಕರು ಸಾವನಪ್ಪಿದ್ದಾರೆ. ಮಾರಿಕಾಂಬಾ ಸರ್ಕಾರಿ ಪ್ರೌಢಶಾಲೆಯ ಉಪಪ್ರಾಚಾರ್ಯ ಯೋಗೇಶ್ವರ ನಾಯ್ಕ ಹೃದಯಘಾತದಿಂದ ಸಾವನಪ್ಪಿದರು. ಚಂದನ ಶಾಲೆಯ ಶಿಕ್ಷಕಿ ಮಾದೇವಿ ನಾಯ್ಕ ಅನಾರೋಗ್ಯದಿಂದ ಕೊನೆ ಉಸಿರೆಳೆದರು.
ಯೋಗೇಶ್ವರ ನಾಯ್ಕ ಅವರು ಸಿದ್ದಾಪುರ ತಾಲೂಕಿನ ಬೇಡ್ಕಣಿಯವರು. ಹಾವೇರಿಯಲ್ಲಿ ಸಹ ಅವರು ಸೇವೆ ಸಲ್ಲಿಸಿದ್ದರು. ಕಳೆದ ಒಂದು ವರ್ಷದಿಂದ ಮಾರಿಕಾಂಬಾ ಪ್ರೌಢಶಾಲೆಯಲ್ಲಿ ಉಪಪ್ರಾಂಶುಪಾಲರಾಗಿದ್ದರು. ಶುಕ್ರವಾರ ನಡೆದ ಪಾಲಕರ ಸಭೆಯಲ್ಲಿ ಅವರು ಅತ್ಯಂತ ಭಾವನಾತ್ಮಕವಾಗಿ ಭಾಷಣ ಮಾಡಿದ್ದರು. ಹೀಗಾಗಿ `ಅವರು ಈಗಿಲ್ಲ’ ಎಂದು ವಿದ್ಯಾರ್ಥಿಗಳು ಹಾಗೂ ಪಾಲಕರಿಂದ ಅರೆಗಿಸಿಕೊಳ್ಳಲು ಆಗಲಿಲ್ಲ.
ಚಂದನ ಶಾಲೆಯ ಶಿಕ್ಷಕಿ ಮಾದೇವಿ ನಾಯ್ಕ ಅವರು 20 ವರ್ಷಗಳಿಂದ ಶಿಕ್ಷಕರಾಗಿದ್ದು, ಮಕ್ಕಳನ್ನು ಅತಿಯಾಗಿ ಹಚ್ಚಿಕೊಂಡಿದ್ದರು. ಕುಮಟಾ ತಾಲೂಕಿನವರಾಗಿದ್ದ ಅವರು ಶಿರಸಿಯ ಚಿಪಗಿ ನಾರಾಯಣ ಗುರು ನಗರದಲ್ಲಿ ವಾಸವಾಗಿದ್ದರು. ಕನ್ನಡ ವಿಷಯದಲ್ಲಿ ಅಪಾರ ಜ್ಞಾನವನ್ನು ಹೊಂದಿದ್ದರು. ಮಕ್ಕಳಲ್ಲಿ ಕನ್ನಡ ಪ್ರೇಮ ಮೂಡಿಸುವಲ್ಲಿ ಶ್ರಮಿಸುತ್ತಿದ್ದರು. ಚಿಕಿತ್ಸೆಗಾಗಿ ಮಂಗಳೂರಿಗೆ ಸಾಗಿಸಿದರೂ ಮಾದೇವಿ ನಾಯ್ಕ ಅವರನ್ನು ಬದುಕಿಸಿಕೊಳ್ಳಲು ಸಾಧ್ಯವಾಗಲಿಲ್ಲ.
ಈ ಇಬ್ಬರು ಶಿಕ್ಷಕರ ನಿಧನದಿಂದ ಮಕ್ಕಳು ಹಾಗೂ ಪಾಲಕರು ಬಿಕ್ಕಿ ಬಿಕ್ಕಿ ಅತ್ತರು. ನೆಚ್ಚಿನ ಗುರುವನ್ನು ಕಳೆದುಕೊಂಡವರಿoದ ಮಾತು ಹೊರಡಲಿಲ್ಲ.