ಕಾರವಾರ: `ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿರುವ ಪ್ರವಾಸಿ ತಾಣಗಳಿಂದ ಸಂಗ್ರಹವಾಗುವ ಆದಾಯದಲ್ಲಿ ಪಂಚಾಯತಿಗಳಿಗೆ ಯಾವುದೇ ರೀತಿಯ ಪಾಲು ಸಿಗುತ್ತಿಲ್ಲ’ ಎಂಬ ವಿಷಯ ಐದನೇ ಹಣಕಾಸು ಆಯೋಗದ ಸಭೆಯಲ್ಲಿ ಈ ವಿಷಯ ಚರ್ಚೆಗೆ ಬಂದಿದೆ.
ಗುರುವಾರ ಜಿ ಪಂ ಸಭಾ ಭವನದಲ್ಲಿ ಹಣಕಾಸು ಆಯೋಗದ ಅಧ್ಯಕ್ಷ ನಾರಾಯಣಸ್ವಾಮಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಗ್ರಾ ಪಂ ಅಧ್ಯಕ್ಷರೊಬ್ಬರು ಈ ವಿಷಯ ಪ್ರಸ್ತಾಪಿಸಿದರು. ಆಯೋಗದ ಸದಸ್ಯ ಮೊಹಮ್ಮದ್ ಸನಾಉಲ್ಲಾ, `ಪ್ರವಾಸಿ ತಾಣಗಳಲ್ಲಿ ಕಸ ಸಂಗ್ರಹಣೆ, ನಿರ್ವಹಣೆ ಎಲ್ಲವೂ ಗ್ರಾಮ ಪಂಚಾಯತದಿoದ ಮಾಡಲಾಗುತ್ತದೆ. ಆದರೆ, ಆದಾಯ ಮಾತ್ರ ಪ್ರವಾಸೋದ್ಯಮ ಇಲಾಖೆ ಅಥವಾ ಅರಣ್ಯ ಇಲಾಖೆಯ ತೆಗೆದುಕೊಳ್ಳುತ್ತದೆ. ಈ ಆದಾಯದಲ್ಲಿಯೂ ಹಂಚಿಕೆಯಾಗಬೇಕು’ ಎಂದು ಸೂಚಿಸಿದರು. `ಇಲ್ಲವಾದಲ್ಲಿ ಅವರವರ ಕೆಲಸಕ್ಕೆ ಅನುಗುಣವಾಗಿ ಹಣ ಪಾವತಿಯಾಗಬೇಕು’ ಎಂದರು.
`ರಾಜ್ಯ ಸರ್ಕಾರದಿಂದ ವ್ಯವಸ್ಥಿತ ಅನುದಾನ ಹಂಚಿಕೆ, ಸಂಪನ್ಮೂಲಗಳ ಹಂಚಿಕೆ, ಆಡಳಿತಕ್ಕೆ ಸಂಬoಧಿಸಿದ ಸಲಹೆ ಮತ್ತು ಯೋಜನೆಗಳನ್ನು ಜಾರಿಗೆ ತರುವಲ್ಲಿ ಆಯೋಗದಿಂದ ಶಿಫಾರಸ್ಸು ಮಾಡಲು ಸ್ಥಳೀಯ ಸಂಸ್ಥೆಗಳ ಚುನಾಯಿತ ಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಅನಿಸಿಕೆಗಳು ಅವಶ್ಯವಾಗಿದೆ’ ಎಂದರು. `ಅತಿವೃಷ್ಠಿ, ಪ್ರವಾಹ, ನೆರೆ ಹಾವಳಿ, ಭೂ ಕುಸಿತ ಸಂದರ್ಭದಲ್ಲಿ ವಿಪತ್ತು ನಿರ್ವಹಣೆಗಾಗಿ ಹೆಚ್ಚಿನ ಹಣವ್ಯಯ ಮಾಡಬೇಕಾಗಿದ್ದು ಆ ನಿಟ್ಟಿನಲ್ಲಿ ಹಣಕಾಸು ಹಂಚಿಕೆಗೆ ಸಂಬoಧಿಸಿದoತೆ ಚರ್ಚಿಸಿ ಸರ್ಕಾರಕ್ಕೆ ಶಿಫಾರಸ್ಸು ಮಾಡುವೆ’ ಎಂದು ರಾಜ್ಯದ ಐದನೇ ಹಣಕಾಸು ಆಯೋಗದ ಅಧ್ಯಕ್ಷ ನಾರಾಯಣಸ್ವಾಮಿ ತಿಳಿಸಿದರು.
ಆಯೋಗದ ಸದಸ್ಯರಾದ ಮೊಹಮ್ಮದ್ ಸನಾವುಲ್ಲಾ, ಆರ್ ಎಸ್ ಫೋಂಡೆ ಅವರ ನೇತೃತ್ವದಲ್ಲಿ ಗ್ರಾಮೀಣ ಹಾಗೂ ನಗರ ಸ್ಥಳೀಯ ಸಂಸ್ಥೆಗಳ ಸಾಂಸ್ಥಿಕ ರಚನೆ, ಕಾರ್ಯಚಟುವಟಿಕೆಗಳು, ಆರ್ಥಿಕ ಸ್ಥಿತಿ, ಸಂಪನ್ಮೂಲಗಳ ಕ್ರೋಢೀಕರಣ ಹಂಚಿಕೆ ಮತ್ತು ಮೂಲ ಸೌಕರ್ಯ ಹಾಗೂ ಸೇವೆಗಳ ಒದಗಿಸುವಿಕೆಯಲ್ಲಿ ತಾಂತ್ರಿಕ ಕೌಶಲ್ಯ, ಸಾಮರ್ಥ್ಯ ಇತ್ಯಾದಿಗಳನ್ನು ಅಧ್ಯಯನ ನಡೆಯಿತು. ಈ ವೇಳೆ ಜಿಲ್ಲೆಯ ಪಂಚಾಯತ ರಾಜ್ ಸಂಸ್ಥೆಗಳು ಮತ್ತು ನಗರ ಸ್ಥಳೀಯ ಸಂಸ್ಥೆಗಳಿಗೆ ಸಂಬoಧಿಸಿದ ವಿಷಯಗಳ ಕುರಿತು ಪರಿಶೀಲನಾ ಸಭೆ ನಡೆಸಿದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯಾ, ಜಿ.ಪಂ. ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಈಶ್ವರ್ ಕಾಂದೂ, ಜಿಲ್ಲಾ ವಿಕೇಂದ್ರೀಕರಣ ಸಮಿತಿ ಉಪಾಧ್ಯಕ್ಷ ಪ್ರಮೋದ ಹೆಗಡೆ, ಸಲಹೆಗಾರರಾದ ಕೆಂಪೇಗೌಡ, ಯಾಲಕ್ಕಿ ಗೌಡ, ಸುಪ್ರಸನ್ನ ಇತರರಿದ್ದರು.