ಭಟ್ಕಳ: ಮುರುಡೇಶ್ವರ ಪ್ರವಾಸಕ್ಕೆ ಬಂದ ನಾಲ್ವರು ವಿದ್ಯಾರ್ಥಿಗಳು ಸಾವನಪ್ಪಿದಕ್ಕಾಗಿ ಶಾಲಾ ಶಿಕ್ಷಕರ ತಲೆದಂಡವಾಗಿದೆ. ಶಾಲಾ ಶಿಕ್ಷಕರನ್ನು ಅಮಾನತು ಮಾಡಿದಕ್ಕಾಗಿ ಕೋಲಾರದ ಜನಪ್ರತಿನಿಧಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದರೊಂದಿಗೆ `ಉತ್ತರ ಕನ್ನಡ ಜಿಲ್ಲೆಯಲ್ಲಿ ಪದೇ ಪದೇ ಅನಾಹುತ ನಡೆಯುತ್ತಿದ್ದು, ಸುರಕ್ಷಿತ ಪ್ರವಾಸೋದ್ಯಮ ನಡೆಸಲು ಜಿಲ್ಲಾಡಳಿತ ವಿಫಲವಾಗಿದೆ’ ಎಂದು ಕೋಲಾರ ಶಾಸಕ ಮಂಜುನಾಥ ಆರೋಪಿಸಿದ್ದಾರೆ.
ಸಾವನಪ್ಪಿದ ವಿದ್ಯಾರ್ಥಿಗಳ ಪಾಲಕರನ್ನು ಮುರುಡೇಶ್ವರಕ್ಕೆ ಕರೆತಂದ ಅವರು ಇಲ್ಲಿನ ಆಡಳಿತ ವೈಫಲ್ಯದ ವಿರುದ್ಧ ಕಿಡಿಕಾರಿದರು. `ಶಿಕ್ಷಕರನ್ನು ಅಮಾನತು ಮಾಡುವ ಬದಲು ಪ್ರವಾಸೋದ್ಯಮ ಅಧಿಕಾರಿಗಳನ್ನು ಅಮಾನತು ಮಾಡಬೇಕು. ಪ್ರವಾಸೋದ್ಯಮ ಅಧಿಕಾರಿಗಳ ಅಸಡ್ಡೆಯಿಂದ ಈ ಸಾವು ಉಂಟಾಗಿದೆ. ಜಿಲ್ಲೆಯಲ್ಲಿ ಸಮುದ್ರ ಪಾಲಾಗಿ ಸಾವನಪ್ಪುವ ಸಂಖ್ಯೆ ಹೆಚ್ಚಾಗಿದ್ದು, ಇದೇ ಮೊದಲಲ್ಲ’ ಎಂದು ಅವರು ಹೇಳಿದರು.
`ಸಾವಿರಾರು ಭಕ್ತರು, ಪ್ರವಾಸಿಗರು ಬರುವ ಮುರ್ಡೇಶ್ವರದಲ್ಲಿ ರಕ್ಷಣಾ ಸಿಬ್ಬಂದಿ ಇಲ್ಲ. ಸಮುದ್ರದಲ್ಲಿ ಮಕ್ಕಳು ಮುಳುಗಿದ ನಂತರ ಸಮುದ್ರಕ್ಕೆ ಬರುವವರನ್ನು ನಿಯಂತ್ರಿಸುವುದು ಸರಿಯಲ್ಲ. ಅದರ ಬದಲು ಸೂಕ್ತ ಸುರಕ್ಷತೆ ಒದಗಿಸಬೇಕು’ ಎಂದು ಒತ್ತಾಯಿಸಿದರು. `ಪ್ರವಾಸೋದ್ಯಮ ಇಲಾಖೆಗೆ ಭದ್ರತೆ ಕೊಡಲು ಸಾಧ್ಯವಿಲ್ಲ ಎಂದಾದರೆ ಆ ಇಲಾಖೆಯನ್ನು ಮುಚ್ಚಬೇಕು. ಕಡಲತೀರದಲ್ಲಿ ಸುರಕ್ಷತೆಗಾಗಿ ರಕ್ಷಕ ಸಿಬ್ಬಂದಿ ಜೊತೆ ಪೊಲೀಸರನ್ನು ನಿಯೋಜಿಸಬೇಕು’ ಎಂದು ಆಗ್ರಹಿಸಿದರು.



