ಯಲ್ಲಾಪುರ: ಪಟ್ಟಣದ ನಾಯ್ಕನಕೆರೆ ಪ್ರದೇಶದಲ್ಲಿ ನೂತನವಾಗಿ ನಿರ್ಮಿಸಲಾದ ದತ್ತ ಮಂದಿರದ ಲೋಕಾರ್ಪಣೆಗೆ ಸಜ್ಜಾಗಿದೆ. ದೇವರ ಪುನರ್ ಪ್ರತಿಷ್ಠಾಪನೆ ಅಂಗವಾಗಿ ಡಿಸೆಂಬರ್ 13ರಿಂದ ಮೂರು ದಿನಗಳ ಕಾಲ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ರಾಘವೇಶ್ವರ ಶ್ರೀಗಳ ಸಾನ್ನಿಧ್ಯದಲ್ಲಿ ಪ್ರತಿಷ್ಠಾಪನಾ ವಿಧಿವಿಧಾನಗಳು ನಡೆಯಲಿದ್ದು, ಹದಿನೈದಕ್ಕೂ ಹೆಚ್ಚು ವೈದಿಕರಿಂದ ಧಾರ್ಮಿಕ ಕಾರ್ಯಕ್ರಮ ನಡೆಯಲಿದೆ. ದತ್ತ ಜಯಂತಿಯ ಪೂರ್ವಾಂಗವಾಗಿ ಗುರುಚರಿತ್ರೆ ಪಾರಾಯಣ, ಕೃಷ್ಣಯಜುರ್ವೇದ ಪಾರಾಯಣಗಳು ಈಗಾಗಲೇ ಪ್ರಾರಂಭವಾಗಿದೆ. ನೂತನ ಶಿಲಾಮಯ ದೇವಾಲಯದಲ್ಲಿ ದತ್ತಮೂರ್ತಿ ಪ್ರತಿಷ್ಠಾಪನಾ ಕಾರ್ಯಕ್ರಮಕ್ಕಾಗಿ ನೂರಾರು ಕಾರ್ಯಕರ್ತರು ಹಗಲಿರುಳು ಶೃಮಿಸುತ್ತಿದ್ದಾರೆ. ಆವರಣದಲ್ಲಿ ಬೃಹತ್ ಯಾಗಶಾಲೆ ನಿರ್ಮಿಸಲಾಗಿದೆ.
ಪ್ರತಿಷ್ಠಾಪನಾ ಕಾರ್ಯಕ್ಕೆ ಆಗಮಿಸುವ ಭಕ್ತಾಧಿಗಳಿಗೆ ವಾಹನ ನಿಲುಗಡೆಗೆ ನಾಲ್ಕೂ ದಿಕ್ಕಿನಲ್ಲಿ ವ್ಯವಸ್ಥೆ ಕಲ್ಪಿಸಲಾಗಿದೆ. ಇಲ್ಲಿ ಸೇವಾ ಕೌಂಟರ್ ತೆರೆಯಲಾಗುತ್ತದೆ. ದೇವಸ್ಥಾನದ ಪಕ್ಕದಲ್ಲಿ ಬೃಹತ್ ಎರಡು ಪೆಂಡಾಲ್ ಹಾಕಲಾಗಿದ್ದು, ಪ್ರತಿದಿನ ಸುಮಾರು ಆರು ಸಾವಿರ ಜನ ಸೇರಲಿದ್ದಾರೆ. ಆಗಮಿಸುವ ಎಲ್ಲರಿಗೂ ಮೂರು ದಿನ ಮೂರು ಹೊತ್ತು ಅನ್ನದಾಸೋಹ ನಡೆಯಲಿದೆ. ಇದರೊಂದಿಗೆ ಪ್ರತಿದಿನ ಸಂಜೆ ವಿವಿಧ ಮನರಂಜನಾ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ಕಳೆದ ವರ್ಷ ದತ್ತ ಜಯಂತಿ ಉತ್ಸವದಲ್ಲಿ ದೇವಾಲಯ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿದ ಶ್ರೀ ರಾಘವೇಶ್ವರ ಭಾರತೀ ಸ್ವಾಮಿಗಳು, 2024 ರ ದತ್ತ ಜಯಂತಿಯAದು ಪ್ರತಿಷ್ಠೆ ನೆರವೇರಿಸಲು ನಿರ್ದೇಶನ ನೀಡಿದ್ದರು. ಕೇವಲ ಮೂರು ತಿಂಗಳಲ್ಲಿ ಸುಂದರವಾದ ದ್ರಾವಿಡ ಶೈಲಿಯ ದೇವಾಲಯ ನಿರ್ಮಾಣಗೊಂಡಿದ್ದು, ಪ್ರತಿಷ್ಠೆಗೆ ಸಜ್ಜಾಗಿದೆ. ವೆಂಕಟರಮಣ ಸೂರಾಲು, ರತ್ನಾ, ಸತೀಶ ದಾನಗೇರಿ ಅವರ ನೇತೃತ್ವದಲ್ಲಿ ಶಿಲ್ಪಕಲೆಯ ಕೆತ್ತನೆಗಳು ಮೂಡಿ ಬಂದಿವೆ. ಪೂರ್ವಾಭಿಮುಖವಾದ ದೇವಸ್ಥಾನದಲ್ಲಿ ಒಟ್ಟು 12 ಕಂಬಗಳಿದ್ದು, ಪ್ರತಿ ಎರಡು ಕಂಬಗಳು ಒಂದು ರೀತಿಯ ಕೆತ್ತನೆಯನ್ನು ಹೊಂದಿವೆ. ಮಹೇಶ ಮುನಿಯಂಗಳ ಅವರ ವಾಸ್ತು ಮಾರ್ಗದರ್ಶನದಲ್ಲಿ ನಾಯಕನಕೆರೆಯ ಪಕ್ಕ ಈ ಮಂದಿರ ನಿರ್ಮಾಣಗೊಂಡಿದೆ.
ಸ್ವಾತಂತ್ರ‍್ಯ ಪೂರ್ವದಲ್ಲಿ ತಾಲೂಕಿನ ಹಿತ್ಲಳ್ಳಿಯ ಬ್ರಹ್ಮಾನಂದ ಗಣೇಶ ಯೋಗಿಗಳು ದತ್ತಗುರುವಿನ ಮೂರ್ತಿ ಪ್ರತಿಷ್ಠಾಪಿಸಿದರು. ಮಂದಿರ ನಿರ್ಮಿಸಿ ಅಭಿವೃದ್ಧಿ ಪರ್ವಕ್ಕೆ ನಾಂದಿ ಹಾಡಿದವರು ಬಪ್ಪನಕೊಡ್ಲು ಶ್ರೀ ಶಿವಾನಂದ ಯೋಗಿಗಳು. ಅವರು ತಪ್ಪಸ್ಸನ್ನು ಆಚರಿಸಿದ ಈ ಪುಣ್ಯಭೂಮಿಯಲ್ಲಿ, ಶ್ರೀ ರಾಘವೇಶ್ವರ ಭಾರತೀ ಸ್ವಾಮಿಗಳ ಸಂಕಲ್ಪ, ಮಾರ್ಗದರ್ಶನದಂತೆ ಮಂದಿರ ನಿರ್ಮಾಣವಾಗಿದೆ.
ಗುರುವಾರ ದತ್ತ ಮಂದಿರ ನಿರ್ಮಾಣ ಸಮಿತಿಯ ಪ್ರಮುಖ ಗೋಪಾಲಕೃಷ್ಣ ಭಟ್ಟ ಹಂಡ್ರಮನೆ ಸುದ್ದಿಗಾರರಿಗೆ ಕಾರ್ಯಕ್ರಮ ರೂಪುರೇಷೆಗಳ ಬಗ್ಗೆ ಮಾಹಿತಿ ನೀಡಿದರು. ಸಮಿತಿಯ ಪ್ರಮುಖ ನಾಗರಾಜ ಮದ್ಗುಣಿ, ಪ್ರಮುಖರಾದ ಪ್ರಮೋದ ಹೆಗಡೆ, ಮಹೇಶ ಚಟ್ನಳ್ಳಿ, ಪ್ರಮೋದ ಹೆಗಡೆ ಇದ್ದರು.