ಹೊನ್ನಾವರ: ಮನೆ ಹಿಂದಿನ ಹಿತ್ತಲಿಗೆ ಹೋದ ವಾಸು ನಾಯ್ಕ ಹೊಳೆಗೆ ಬಿದ್ದು ಸಾವನಪ್ಪಿದ್ದಾರೆ. ಅವರ ಮನೆಯಿಂದ ಅನತಿ ದೂರದ ನದಿಯಲ್ಲಿ ವಾಸು ಅವರ ಶವ ಸಿಕ್ಕಿದೆ.
ಹೊನ್ನಾವರದ ಮುಟ್ಟಾ ಜನ್ನಕಡ್ಕಲ್ ಬಳಿಯ ಹರಡಸೆ ಗ್ರಾಮದ ವಾಸು ಸಣ್ತಮ್ಮ ನಾಯ್ಕ (64) ಅವರು ಡಿ 10ರಂದು ನೀರಿನ ಪಂಪ್ ಚಾಲು ಮಾಡಲು ಹಿತ್ತಲಿಗೆ ಹೋಗಿದ್ದರು. ಸಂಜೆಯಾದರೂ ಅವರು ಮನೆಗೆ ಮರಳಿರಲಿಲ್ಲ. ಹೀಗಾಗಿ ಅವರ ಮಗ ಮಾರುತಿ ನಾಯ್ಕ ಪೊಲೀಸ್ ಠಾಣೆಗೆ ತೆರಳಿ ತಂದೆ ಕಾಣೆಯಾದ ಬಗ್ಗೆ ದೂರು ನೀಡಿದ್ದರು.
ಪೊಲೀಸ್ ಠಾಣೆಯಿಂದ ಮನೆಗೆ ಮರಳುತ್ತಿದ್ದ ಮಾರುತಿ ಅವರಿಗೆ ಅದೇ ಊರಿನ ಅಚ್ಯುತ ನಾಯ್ಕ ಎದುರಾಗಿದ್ದು, ತಮ್ಮ ಮನೆ ಬಳಿಯಿರುವ ಗುಂಡುಬಾಳ ಹೊಳೆಯಲ್ಲಿ ವ್ಯಕ್ತಿಯೊಬ್ಬರು ತೇಲುತ್ತಿರುವ ಬಗ್ಗೆ ಮಾಹಿತಿ ನೀಡಿದರು. ಅಲ್ಲಿಗೆ ಹೋದ ಮಾರುತಿ ಅವರಿಗೆ ಅಲ್ಲಿ ತೇಲುತ್ತಿರುವುದು ತಮ್ಮ ತಂದೆ ಎಂದು ಖಚಿತವಾಗಿದ್ದು, ಊರಿನವರೆಲ್ಲ ಸೇರಿ ನೀರಿನಲ್ಲಿದ್ದವರನ್ನು ಮೇಲೆತ್ತಿದರು.
ಆದರೆ, ವಾಸು ನಾಯ್ಕ ಅವರು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದರು. ಉಸಿರು ಆಡುತ್ತಿರಲಿಲ್ಲ. ಅದಾಗಿಯೂ ಅವರನ್ನು ಮಾರುತಿ ಅವರು ಆಸ್ಪತ್ರೆಗೆ ದಾಖಲಿಸಿದರು. ಅಲ್ಲಿನ ವೈದ್ಯರು ವಾಸು ಅವರು ಸಾವನಪ್ಪಿರುವುದನ್ನು ಅಧಿಕೃತಗೊಳಿಸಿದರು. ಹೀಗಾಗಿ ಪೊಲೀಸ್ ಪ್ರಕರಣ ದಾಖಲಿಸಿ ಕುಟುಂಬದವರು ಶವ ಪಡೆದರು.




