ಶಿರಸಿ: ಟಿವಿ ನೋಡುವ ವಿಷಯವಾಗಿ ಗಂಡ-ಹೆoಡತಿ ನಡುವೆ ಕಾದಾಟ ನಡೆದಿದ್ದು, ಬೇಸರದಿಂದ ಮನೆ ಬಿಟ್ಟು ಹೋದ ಮಂಜುನಾಥ ಕೋಳಿ ಮೂರು ವಾರ ಕಳೆದರೂ ಮನೆಗೆ ಮರಳಿಲ್ಲ. ಹೀಗಾಗಿ `ಗಂಡನನ್ನು ಹುಡುಕಿಕೊಡಿ’ ಎಂದು ಅವರ ಪತ್ನಿ ಲಕ್ಷ್ಮೀ ಕೋಳಿ ಪೊಲೀಸರ ಮೊರೆ ಹೋಗಿದ್ದಾರೆ.
ಶಿರಸಿ ಕಸ್ತೂರಿಬಾ ನಗರದ ಚೌಡೇಶ್ವರಿ ಕಾಲೋನಿಯ ಮಂಜುನಾಥ ಪುಡ್ಲಿಕಪ್ಪ ಕೋಳಿ (43) ಅಂಗಡಿಯೊoದರಲ್ಲಿ ಕೆಲಸ ಮಾಡುತ್ತಾರೆ. ನ 20ರಂದು ಕೆಲಸ ಮುಗಿಸಿ ಬಂದ ಅವರು ಸಂಜೆ 7 ಗಂಟೆಗೆ ಟಿವಿ ಹಚ್ಚಿದ್ದರು. ತಮ್ಮ ನೆಚ್ಚಿನ ಕಾರ್ಯಕ್ರಮ ತಪ್ಪಿದಕ್ಕಾಗಿ ಪತ್ನಿ ತಕರಾರು ತೆಗೆದಿದ್ದರು. ಟಿವಿ ನೋಡುವ ವಿಷಯವಾಗಿ ಗಂಡ-ಹೆoಡಿರ ನಡುವೆ ಮನಸ್ತಾಪವಾಗಿದ್ದು, `ಜಗಳ ಮಾಡುವುದು ಬೇಡ. ಸುಧಾರಿಸಿಕೊಂಡು ಹೋಗೋಣ’ ಎಂದು ಲಕ್ಷ್ಮೀ ಕೋಳಿ ನುಡಿದಿದ್ದರು. ಅದಾಗಿಯೂ ಬೇಸರಿಸಿಕೊಂಡ ಅವರು ಮನೆ ಬಿಟ್ಟು ಹೊರಟರು.
ಮಂಜುನಾಥ ಕೋಳಿ ಅವರು ತಾವು ಕೆಲಸ ಮಾಡುವ ಅಂಗಡಿಯಲ್ಲಿ ರಾತ್ರಿ ಕಳೆಯಬಹುದು ಎಂದು ಅವರ ಪತ್ನಿ ಸುಮ್ಮನಾಗಿದ್ದರು. ಮನೆ ಬಿಟ್ಟು ಹೊರಡುವಾಗ ಸಹ `ಅಂಗಡಿಯಲ್ಲಿ ಮಲಗುವೆ’ ಎಂದು ಮಂಜುನಾಥ ಕೋಳಿ ಸಣ್ಣದಾಗಿ ಗೊಣಗಿದ್ದರು. ಆದರೆ, ಆ ದಿನ ರಾತ್ರಿ ಅವರು ಅಂಗಡಿಗೆ ಹೋಗಲಿಲ್ಲ. ಸ್ನೇಹಿತರು-ಸಂಬoಧಿಕರ ಮನೆಯ ಬಾಗಿಲು ಬಡಿಯಲಿಲ್ಲ. ನೆಮ್ಮದಿ ಅರೆಸಿ ಹೋದ ಅವರು ಹೋದದೆಲ್ಲಿ? ಎಂದು ಯಾರಿಗೂ ಗೊತ್ತಾಗಲಿಲ್ಲ.
ಇನ್ನೂ ಕೆಲ ದಿನಗಳವರೆಗೆ ಮಂಜುನಾಥ ಕೋಳಿ ಮೊಬೈಲ್ ರಿಂಗಾದರೂ ಅವರು ಫೋನ್ ಸ್ವೀಕರಿಸುತ್ತಿರಲಿಲ್ಲ. ಅದಾದ ನಂತರ ಅವರಿಗೆ ಫೋನ್ ಮಾಡಿದರೆ ಸ್ವಿಚ್‌ಆಫ್ ಎಂಬ ಧ್ವನಿ ಮಾತ್ರ ಕೇಳುತ್ತಿದೆ. `ಉದ್ದನೆಯ ಮುಖ, ಸಣಕಲು ದೇಹ, ಗೋಧಿ ಮೈಬಣ್ಣ ಹೊಂದಿದ ಕನ್ನಡ ಭಾಷೆ ಮಾತನಾಡುವ ಮಂಜುನಾಥ ಕೋಳಿ ಅವರನ್ನು ಹುಡುಕಿಕೊಡಿ’ ಎಂದು ಅವರ ಪತ್ನಿ ಲಕ್ಷ್ಮೀ ಕೋಳಿ ಪೊಲೀಸ್ ದೂರು ನೀಡಿದ್ದಾರೆ. ಆಂಜಿನೇಯನ ಮೂರ್ತಿ ಹೊಂದಿದ ಲಾಕೇಟ್’ನ್ನು ಅವರು ಕತ್ತಿನಲ್ಲಿ ಧರಿಸಿದ್ದಾರೆ. ಮಂಜುನಾಥ ಕೋಳಿ ಅವರನ್ನು ನೀವು ಕಂಡಲ್ಲಿ ಇಲ್ಲಿ ಫೋನ್ ಮಾಡಿ: 08384-236330