ಮುಂಡಗೋಡ: ಕೆಂದಲಗೇರಿಯಲ್ಲಿ ಕಿರಾಣಿ ವ್ಯಾಪಾರ ನಡೆಸುವ ದಾನಪ್ಪ ಕಬ್ಬೇರ ತಮ್ಮ ಅಂಗಡಿಯಲ್ಲಿ ಸರಾಯಿಯನ್ನು ಸಹ ಮಾರಾಟ ಮಾಡುತ್ತಾರೆ. ಜೊತೆಗೆ ಅಲ್ಲಿಯೇ ಕೂತು ಮದ್ಯ ಸೇವನೆಗೂ ಅವರು ಅವಕಾಶ ಮಾಡಿಕೊಟ್ಟಿದ್ದಾರೆ. ಆದರೆ, ಇದಕ್ಕೆ ಅವರು ಯಾವುದೇ ಅನುಮತಿ ಪಡೆದಿಲ್ಲ.
ಮುಂಡಗೋಡಿನ ಪೊಲೀಸ್ ಉಪನಿರೀಕ್ಷಕ ಹನುಮಂತ ಕುಡುಗುಂಡಿ ಅವರಿಗೆ ಈ ವಿಷಯ ಗೊತ್ತಾಯಿತು. ಡಿ 12ರ ಸಂಜೆ ಅವರು ಕಂದಲಗೇರಿ ಗ್ರಾಮದ ಕಡೆ ಹೊರಟಿದ್ದರು. ಆ ಗ್ರಾಮದ ಕಿರಾಣಿ ಅಂಗಡಿಯನ್ನು ಪರಿಶೀಲನೆ ಮಾಡಿದರು. ಆಗ ಅಲ್ಲಿ ಅಕ್ರಮವಾಗಿ ದಾಸ್ತಾನು ಮಾಡಿದ್ದ ಬಗೆ ಬಗೆಯ ಮದ್ಯಗಳು ಕಾಣಿಸಿದವು. ಅದರೊಂದಿಗೆ ಸರಾಯಿ ಕುಡಿದು ಬಿಸಾಡಿದ್ದ ಪ್ಲಾಸ್ಟಿಕ್ ಲೋಟಗಳು ಸಿಕ್ಕವು.
ಆ ದಿನ ಸರಾಯಿ ಮಾರಾಟದಿಂದಲೇ ದಾನಪ್ಪ ಕಬ್ಬೇರ 300ರೂ ಆದಾಯ ಪಡೆದಿರುವುದನ್ನು ಅರಿತ ಅವರು ಅಲ್ಲಿದ್ದ ಸರಾಯಿ ಪ್ಯಾಕೇಟ್ ಜೊತೆ, ಖಾಲಿ ಟ್ರೆಟ್ರಾ ಪ್ಯಾಕ್, ಕುಡಿದು ಬಿಸಾಡಿದ ಲೋಟ, ನೀರಿನ ಬಾಟಲಿ ಹಾಗೂ ಮದ್ಯ ಮಾರಾಟದಿಂದ ದೊರೆತಿದ್ದ ಹಣವನ್ನು ವಶಕ್ಕೆ ಪಡೆದರು. ಕಾನೂನುಬಾಹಿರವಾಗಿ ಕಿರಾಣಿ ಅಂಗಡಿಯಲ್ಲಿ ಸರಾಯಿ ಮಾರಾಟ ಮಾಡಿದಕ್ಕಾಗಿ ದಾನಪ್ಪ ಕಬ್ಬೇರ ವಿರುದ್ಧ ಪ್ರಕರಣ ದಾಖಲಿಸಿದರು.