ಯಲ್ಲಾಪುರ: ನಾಯಕನಕೆರೆಯ ದತ್ತ ಮಂದಿರದ ಲೋಕಾರ್ಪಣಾ ಕಾರ್ಯಕ್ರಮ ಶುಕ್ರವಾರದಿಂದ ಶುರುವಾಗಿದ್ದು, ಮೊದಲ ದಿನ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು.
ಅಮೃತೇಶ ಹಿರೆ ಗೋಕರ್ಣ ಅವರ ಪ್ರಧಾನ ಆಚಾರತ್ವದಲ್ಲಿ ನಿರ್ಮಾಣ ಸಮಿತಿಯ ಅಧ್ಯಕ್ಷ ಗೋಪಾಲಕೃಷ್ಣ ಭಟ್ಟ ಹಂಡ್ರಮನೆ ದಂಪತಿ ಜೊತೆ 15 ವೈದಿಕರಿಂದ ಧಾರ್ಮಿಕ ಕಾರ್ಯಕ್ರಮ ನಡೆದವು. ಗುರು ದೇವತಾ ಪ್ರಾರ್ಥನೆ, ಗಣಪತಿ ಪೂಜೆ, ದೇವನಾಂದಿ, ಪುಣ್ಯಾಹವಾಚನ, ಋತ್ವಿಕ್ ವರಣನ, ಬ್ರಹ್ಮಕೂರ್ಚ ಹವನ, ಗಣಹವನ, ಶಿಲ್ಪಿ ಪೂಜೆ, ಆಲಯ ಪರಿಗ್ರಹದ ಮೂಲಕ ಮಹಾ ಸಂಕಲ್ಪ ನಡೆಯಿತು.
ಮಧ್ಯಾಹ್ನ 3 ಗಂಟೆಗೆ ಶ್ರೀ ರಾಮಚಂದ್ರಾಪುರ ಮಠದ ರಾಘವೇಶ್ವರ ಮಹಾಸ್ವಾಮಿಗಳವರ ಪುರ ಪ್ರವೇಶವಾಯಿತು. ಪೂರ್ಣಕುಂಭ ಸ್ವಾಗತ, ಚಂಡೆವಾದನದೊoದಿಗೆ ಹುಲ್ಲೋರಮನೆ ತಿರುವಿನಿಂದ ದತ್ತ ಮಂದಿರ ಆವರಣಕ್ಕೆ ಮೆರವಣಿಗೆ ನಡೆಯಿತು. ದತ್ತ ಮಂದಿರ ಆವರಣಕ್ಕೆ ಪ್ರವೇಶಿಸಿದ ಶ್ರೀಗಳು ನೂತನ ಶಿಲಾಮಯ ದತ್ತ ಮಂದಿರ ಹಾಗೂ ಧಾರ್ಮಿಕ ಕಾರ್ಯಕ್ರಮದ ಯಾಗಶಾಲೆ, ಬಾಲಾಲಯವನ್ನು ವೀಕ್ಷಿಸಿದರು.
ಸಂಜೆ ಧಾರ್ಮಿಕ ಕಾರ್ಯಕ್ರಮದಲ್ಲಿ ಯಾಗಶಾಲಾ ಪ್ರವೇಶ, ಸಪ್ತಶುದ್ಧಿ, ಮಂಟಪ ಸಂಸ್ಕಾರ, ಕಲಶ ಸ್ಥಾಪನೆ, ಉದಕ ಶಾಂತಿ ಪಾರಾಯಣ, ರಾಕ್ಷೆಘ್ನ-ವಾಸ್ತು ಹವನ, ಕುಂಡ ಸಂಸ್ಕಾರ, ಅಗ್ನಿಜನನ, ಶ್ರೀ ದೇವರಿಗೆ ಸಪ್ತಾಧಿವಾಸ, ಶಯ್ಯಾ ಕಲ್ಪನೆ ಕಾರ್ಯಕ್ರಮಗಳು ಜರುಗಿದವು. ಮಧ್ಯಾಹ್ನ ನಡೆದ ಅನ್ನ ಸಂತರ್ಪಣೆಯಲ್ಲಿ ಸಾವಿರಾರು ಜನರು ಪ್ರಸಾದ ಸ್ವೀಕರಿಸಿದರು.
ದತ್ತ ಮಂದಿರದ ಉಸ್ತುವಾರಿ ಮಹೇಶ ಚಟ್ನಳ್ಳಿ, ಲೋಕಾರ್ಪಣಾ ಸಮಿತಿ ಅಧ್ಯಕ್ಷ ಪ್ರಮೋದ ಹೆಗಡೆ, ಮಠದ ಪ್ರತಿನಿಧಿ ಎಸ್ ವಿ.ಯಾಜಿ, ದತ್ತ ಮಂದಿರ ನಿರ್ಮಾಣ ಹಾಗೂ ಲೋಕಾರ್ಪಣಾ ಸಮಿತಿಯ ಹರಿಪ್ರಕಾಶ ಕೋಣೆಮನೆ, ಶಾಂತಾರಾಮ ಹೆಗಡೆ, ಪ್ರಶಾಂತ ಹೆಗಡೆ, ಕೆ ಟಿ ಭಟ್ಟ ಗುಂಡ್ಕಲ್, ಕೆ ಸಿ ನಾಗೇಶ, ಸಿ ಜಿ ಹೆಗಡೆ, ನಾಗೇಶ ಯಲ್ಲಾಪುರಕರ್, ವೇಣುಗೋಪಾಲ ಮದ್ಗುಣಿ, ಶ್ರೀರಂಗ ಕಟ್ಟಿ, ಪ್ರಸಾದ ಹೆಗಡೆ, ರಮೇಶ ಹೆಗಡೆ, ನರಸಿಂಹ ಗಾಂವ್ಕರ್, ನಾಗರಾಜ ಮದ್ಗುಣಿ, ಶಿವಾನಂದ ಹೆಗಡೆ ಇದ್ದರು.
ಶಿಲ್ಪಿಗಳಾದ ವೆಂಕಟ್ರಮಣ ಸೂರಾಲು, ಸತೀಶ ದಾನಗೇರಿ, ವಾಸ್ತು ತಜ್ಞ ಮಹೇಶ ಮುನಿಯಂಗಳ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಮಾರುತಿ ಭಜನಾ ಮಂಡಳಿ ಬಿಸಗೋಡು ಅವರು ಭಜನೆ, ಅನಂತ ಪದ್ಮನಾಭ ಭಟ್ಟ ಇವರಿಂದ ಕೀರ್ತನೆ, ಗಣಪತಿ ಭಟ್ಟ ಮೊಟ್ಟೆಗದ್ದೆ ತಂಡದಿoದ ಗಾನ ವೈಭವ ಕಾರ್ಯಕ್ರಮ ನಡೆಯಿತು.