ಯಲ್ಲಾಪುರ: ಕೌಟುಂಬಿಕ ವ್ಯಾಜ್ಯದಿಂದ ಬೇರೆಯಾಗಿದ್ದ ದಂಪತಿಗೆ ಪರಸ್ಪರ ಹೂವಿನ ಹಾರ ತೊಡಿಸುವ ಮೂಲಕ ನ್ಯಾಯಾಧೀಶರು ಶನಿವಾರ ಒಂದುಗೂಡಿಸಿದರು. ನ್ಯಾಯ ದೇವತೆಗೆ ಸಾಕ್ಷಿಯಾಗಿ ಜೀವನದೂದ್ದಕ್ಕೂ ಒಟ್ಟಿಗೆ ಬಾಳುವುದಾಗಿ ಈ ದಂಪತಿ ಪ್ರಮಾಣ ಮಾಡಿದರು.
ಸರಸ್ವತಿ ಹುಲ್ಲೂರು ಹಾಗೂ ಮಂಜಪ್ಪ ಹುಲ್ಲೂರ ಎಂಬಾತರು ಈ ಹಿಂದೆ ಮದುವೆಯಾಗಿದ್ದು, ಪುಟ್ಟ ಮಗುವನ್ನು ಹೊಂದಿದ್ದರು. ಈ ನಡುವೆ ಇಬ್ಬರ ನಡುವೆ ಬಿರುಕು ಉಂಟಾದ ಪರಿಣಾಮ 2022ರಲ್ಲಿ ವಿವಾಹ ವಿಚ್ಚೇದನಕ್ಕಾಗಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಕೆಯಾಗಿತ್ತು. ಮಗುವಿನ ಮುಖ ನೋಡಿದ ನ್ಯಾಯಾಧೀಶೆ ಲಕ್ಷ್ಮೀಬಾಯಿ ಪಾಟೀಲ ಅವರು ಸರಸ್ವತಿ ಹಾಗೂ ಮಂಜಪ್ಪ ಅವರನ್ನು ಮಾತನಾಡಿಸಿದರು. ಪರಸ್ಪರ ಹೊಂದಾಣಿಕೆಯಿAದ ಕೂಡಿ ಬಾಳುವಂತೆ ಅವರ ಮನವೊಲೈಸಿದರು. `ಮಗುವಿನ ಭವಿಷ್ಯಕ್ಕಾಗಿ ಇಬ್ಬರು ಒಟ್ಟಿಗೆ ಬಾಳಬೇಕು’ ಎಂದು ಕಿವಿಮಾತು ಹೇಳಿದರು.
ನ್ಯಾಯಾಧೀಶರ ಮಾತಿಗೆ ಮನಸೋತ ಸರಸ್ವತಿ ಹುಲ್ಲೂರು ಹಾಗೂ ಮಂಜಪ್ಪ ಹುಲ್ಲೂರ ವಿವಾಹ ವಿಚ್ಚೇದನ ಅರ್ಜಿ ಹಿಂಪಡೆದರು. ಇಬ್ಬರು ರಾಜಿ ಮೂಲಕ ಒಂದಾಗಿದ್ದು, ಪರಸ್ಪರ ಹೂವಿನ ಹಾರ ಬದಲಿಸಿಕೊಂಡು ನ್ಯಾಯ ದೇವತೆಯ ಮುಂದೆ ಮರು ಮದುವೆಯಾದರು. ತಮ್ಮ ಪ್ರಯತ್ನಕ್ಕೆ ದೊರೆತ ಯಶಸ್ಸಿನಿಂದ ನ್ಯಾಯಾಧೀಶರು ಸಹ ಖುಷಿಯಾದರು. ಈ ಹಿನ್ನಲೆ ನ್ಯಾಯಾಲಯದಲ್ಲಿದ್ದವರಿಗೆ ನ್ಯಾಯಾಧೀಶೆ ಲಕ್ಷ್ಮೀಬಾಯಿ ಪಾಟೀಲ ಅವರೇ ಸಿಹಿ ಹಂಚಿದರು.