ಶಿರಸಿ: ಮದ್ಯ ಸೇವಿಸಿದ ಮತ್ತಿನಲ್ಲಿ ಎರಡು ಗುಂಪುಗಳ ನಡುವೆ ಹೊಡೆದಾಟ ನಡೆದಿದ್ದು, ಒಂದು ಗುಂಪಿನ ಇಬ್ಬರ ಮೇಲೆ ಎದುರು ಗುಂಪಿನವರು ಬೀಯರ್ ಬಾಟಲಿ ಒಡೆದು ಚುಚ್ಚಿದ್ದಾರೆ. ಬಿಯರ್ ಬಾಟಲಿ ಚುಚ್ಚಿಸಿಕೊಂಡವರು ರಕ್ತದ ಮೊಡವಿನಲ್ಲಿ ಬಿದ್ದು ಹೊರಳಾಟ ನಡೆಸಿದ್ದಾರೆ.
ಶಿರಸಿ ಕಸದಗುಡ್ಡೆಯ ವಿಶ್ವನಾಥ ಹುಲ್ಯಾಳ ಅವರು ಡಿ 22ರ ರಾತ್ರಿ 10.30ಕ್ಕೆ ಕೆರೆಗುಂಡಿಯ `ಕ್ವಾಲಿಟಿ ವೈನ್’ನಲ್ಲಿ ಕೂತಿದ್ದರು. ಅವರ ಜೊತೆ ಕಸ್ತೂರಿಬಾ ನಗರದ ಶ್ರೀಕಾಂತ ಹೆಬ್ಬಾಳ ಹಾಗೂ ಪರಶುರಾಮ ಬಾರೇಕರ್ ಹರಟುತ್ತಿದ್ದರು. ಆಗ ಪರಶುರಾಮರ ತಮ್ಮ ಪ್ರವೀಣ ಬಾರೇಕರ್ ಫೋನ್ ಮಾಡಿದರು. `ಹುಬ್ಬಳ್ಳಿ ರಸ್ತೆಯ ಗಾಯತ್ರಿ ವೈನ್ ಬಳಿ ಕಸ್ತುರಿಬಾ ನಗರದ ಶಾರುಕ್ ಹಾಗೂ ಎಸಳೆಯ ದರ್ಶನ್ ಸೇರಿ ತಮ್ಮೊಂದಿಗೆ ಜಗಳ ಮಾಡುತ್ತಿದ್ದಾರೆ’ ಎಂದು ಪ್ರವೀಣ್ ಫೋನಿನಲ್ಲಿ ಹೇಳಿದರು.
ವಿಷಯ ತಿಳಿದ ಕೂಡಲೇ ವಿಶ್ವನಾಥ ಹುಲ್ಯಾಳ, ಶ್ರೀಕಾಂತ ಹೆಬ್ಬಾಳ ಹಾಗೂ ಪರಶುರಾಮ ಬಾರೇಕರ್ ಕ್ವಾಲಿಟಿ ವೈನಿನಿಂದ ಹೊರಟು ಗಾಯತ್ರಿ ವೈನ್’ಗೆ ತಲುಪಿದರು. ಆಗ ಅಲ್ಲಿ ಪ್ರವೀಣನ ಜೊತೆ ಜಗಳ ಮಾಡುತ್ತಿದ್ದ ಕಸ್ತೂರಿಬಾ ನಗರದ ಶಿವು ದೇವಾಡಿಗ ಹಾಗೂ ಶ್ರೀಕಾಂತ ದೇವಾಡಿಗ `ಶಿರಸಿ ಮಾರಿಕಾಂಬಾ ಜಾತ್ರೆಯಲ್ಲಿ ನಿನಗೋಸ್ಕರ ಹೊಡೆದಾಟ ನಡೆಸಿದ್ದೇವೆ. ಅದಕ್ಕಾಗಿ ನಾವು ಜೈಲಿಗೆ ಹೋಗಿ ಬಂದಿದ್ದೇವೆ’ ಎಂದು ಕೂಗಾಡುತ್ತಿದ್ದರು. `ಈಗ ನೀನು ನಮ್ಮ ಜೊತೆ ಜಗಳ ಮಾಡುತ್ತೀಯಾ?’ ಎಂದು ಶಿವು ದೇವಾಡಿಗ ಹಾಗೂ ಶ್ರೀಕಾಂತ ದೇವಾಡಿಗ ಸೇರಿ ಪ್ರವೀಣ ಬಾರೇಕರ್’ರನ್ನು ಪ್ರಶ್ನಿಸುತ್ತಿದ್ದರು.
ಇದನ್ನು ನೋಡಿದ ವಿಶ್ವನಾಥ ಹುಲ್ಯಾಳ ಅವರನ್ನು ಸಮಾಧಾನಪಡಿಸುವ ಪ್ರಯತ್ನ ಮಾಡಿದರು. ಅವರಿಗೆ ಬುದ್ದಿ ಹೇಳಿ ಪ್ರವೀಣನನ್ನು ಕರೆದುಕೊಂಡು ಮನೆಗೆ ಮರಳುತ್ತಿದ್ದಾಗ ಶಿವು ದೇವಾಡಿಗ ಹಾಗೂ ಶ್ರೀಕಾಂತ ದೇವಾಡಿಗ ಸೇರಿ ಪ್ರವೀಣನಿಗೆ ಹೊಡೆಯಲು ಶುರು ಮಾಡಿದರು. ಆಗ ಪ್ರವೀಣ `ನೀವು ನನ್ನ ಸಲುವಾಗಿ ಜಗಳ ಮಾಡಿ ಜೈಲಿಗೆ ಹೋಗಿಲ್ಲ’ ಎಂದು ಹೇಳಿದ್ದರಿಂದ ಇನ್ನಷ್ಟು ಏಟು ಬಿದ್ದವು. ಇದರಿಂದ ಸಿಟ್ಟಾದ ಶಿವು ದೇವಾಡಿಗ ಅಲ್ಲಿ ಬಿದ್ದಿದ್ದ ಬಿಯರ್ ಬಾಟಲಿ ಒಡೆದು ಪ್ರವೀಣನ ಹೊಟ್ಟೆಗೆ ಚುಚ್ಚಿದರು.
ನೋವಿನಿಂದ ಕೂಗುತ್ತಿದ್ದ ಪ್ರವೀಣನಿಗೆ ರಕ್ಷಣೆ ನೀಡಲು ಬಂದ ವಿಶ್ವನಾಥ ಹುಲ್ಯಾಳ ಅವರಿಗೂ ಶ್ರೀಕಾಂತ ದೇವಾಡಿಗ ಇನ್ನೊಂದು ಬಾಟಲಿ ಒಡೆದು ಚುಚ್ಚಿದರು. ಈ ವೇಳೆ ವಿಶ್ವನಾಥ ಹುಲ್ಯಾಳ್ ತಪ್ಪಿಸಿಕೊಳ್ಳುವ ಪ್ರಯತ್ನ ನಡೆಸಿದ ಪರಿಣಾಮ ಅವರ ಗಲ್ಲಕ್ಕೆ ಒಡೆದ ಬಾಟಲಿ ಚುಚ್ಚಿತು. ಇಷ್ಟು ಹೊತ್ತು ಇದನ್ನೆಲ್ಲ ನೋಡುತ್ತಿದ್ದ ದರ್ಶನ ತಡಕನಳ್ಳಿ ಅಲ್ಲಿದ್ದ ಕಲ್ಲು ಬೀಸಿದರು. ಅದು ಪರಶುರಾಮ ಬಾರೇಕರ್ ಅವರಿಗೆ ತಾಗಿತು. ಇದಾದ ನಂತರ ಶ್ರೀಕಾಂತ ಹೆಬ್ಬಾಳ, ಶಾರುಕ್ ಹಾಗೂ ದರ್ಶನ್ ಸೇರಿ ಈ ಮೂವರ ಮೇಲೆಯೂ ಕಲ್ಲು ತೂರಾಟ ನಡೆಸಿದರು.
ಈ ಮೂವರ ಬೊಬ್ಬೆ ಕೇಳಿ ಜನ ಜಮಾಯಿಸಲು ಶುರು ಮಾಡಿದರು. ಜನ ಬರುವುದನ್ನು ನೋಡಿದ ನಾಲ್ವರು `ಪ್ರವೀಣ, ನಿನ್ನ ಸಲುವಾಗಿ ಜಾತ್ರೆಯಲ್ಲಿ ಹೊಡೆದಾಟ ಮಾಡಿ, ಜೈಲಿಗೆ ಹೋಗಿದ್ದೇವೆ. ಅದಾಗಿಯೂ ನೀನು ನಮ್ಮ ಜೊತೆ ಜಗಳ ಮಾಡುತ್ತೀಯಾ? ನಿನ್ನನ್ನು ಕೊಲ್ಲದೇ ಬಿಡುವುದಿಲ್ಲ’ ಎಂಬ ಬೆದರಿಕೆ ಹಾಕಿ ಅಲ್ಲಿಂದ ಓಡಿದರು. ಈ ಎಲ್ಲಾ ಘಟನಾವಳಿಗಳ ಬಗ್ಗೆ ವಿಶ್ವನಾಥ ಹುಲ್ಯಾಳ ಪೊಲೀಸ್ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ಶುರು ಮಾಡಿದ್ದಾರೆ.