ಕಾರವಾರ: ಸರ್ಕಾರಿ ಸೇವೆ ಸೇರಬೇಕು ಎಂಬುದು ಎಲ್ಲರ ಕನಸು. ಸರ್ಕಾರಿ ಸೇವೆ ಸೇರಿದ ನಂತರ ಹೇಗಿರಬೇಕು? ಎನ್ನುವುದಕ್ಕೆ ವಿನೋದ ಅಣ್ವೇಕರ್ ಅವರು ಮಾದರಿ. 1989ರಲ್ಲಿ ಸಹಾಯಕ ಸಂಖ್ಯಾಧಿಕಾರಿಯಾಗಿ ಸೇವೆಗೆ ಸೇರಿದ ವಿನೋದ ಅಣ್ವೇಕರ್ ಅವರು ಇದೀಗ ಉತ್ತರ ಕನ್ನಡ ಜಿಲ್ಲಾ ಪಂಚಾಯತ ಯೋಜನಾಧಿಕಾರಿಯಾಗಿದ್ದಾರೆ. 35 ವರ್ಷಗಳ ಸೇವೆ ಪೂರೈಸಿ ಡಿಸೆಂಬರ್ ಅಂತ್ಯಕ್ಕೆ ನಿವೃತ್ತರಾಗಲಿದ್ದಾರೆ.
ಆರ್ಥಿಕ ಮತ್ತು ಸಾಂಖ್ಯಿಕ ಇಲಾಖೆ ವಿನೋದ ಅನ್ವೇಕರ್ ಅವರ ಮಾತೃ ಇಲಾಖೆ. ಅದಾಗಿಯೂ ಅವರು ಶಿಕ್ಷಣ ಇಲಾಖೆ, ಆರೋಗ್ಯ ಇಲಾಖೆ, ಗ್ರಾಮೀಣಾಭಿವೃದ್ಧಿ ಇಲಾಖೆಗಳ ವಿವಿಧ ಹುದ್ದೆಗಳಲ್ಲಿ ನಿಯೋಜನೆ ಆಧಾರದಲ್ಲಿ ಕೆಲಸ ಮಾಡಿದ್ದಾರೆ. ಪ್ರಸ್ತುತ ಉತ್ತರ ಕನ್ನಡ ಜಿಲ್ಲಾ ಪಂಚಾಯತದ ಯೋಜನಾಧಿಕಾರಿಯಾಗಿದ್ದಾರೆ. ಶಿರಸಿ, ಅಂಕೋಲಾ, ಹೊನ್ನಾವರ, ಕಾರವಾರ, ಬೆಳಗಾವಿ ಸೇರಿ ವಿವಿಧ ಭಾಗಗಳಲ್ಲಿ ಸೇವೆ ಸಲ್ಲಿಸಿದ್ದು, ಅವರ ಸೇವಾ ಪುಸ್ತಕದಲ್ಲಿ ಒಂದೇ ಒಂದು ಕಪ್ಪು ಚುಕ್ಕೆಯೂ ದಾಖಲಾಗಿಲ್ಲ. 35 ವರ್ಷದ ಸರ್ಕಾರಿ ಸೇವೆಯಲ್ಲಿ ಅವರ ವಿರುದ್ಧ ಒಂದು ಆರೋಪವೂ ಕೇಳಿ ಬಂದಿಲ್ಲ. ಸುದೀರ್ಘ ಸರ್ಕಾರಿ ಸೇವೆಯಲ್ಲಿದ್ದರೂ ಅವರಿಗೆ ಒಬ್ಬರೂ ವಿರೋಧಿಗಳಿಲ್ಲ. ಸರ್ಕಾರಿ ನೌಕರರಿಗೆ ಸಾಮಾನ್ಯವಾದ `ಕಾರಣ ಕೇಳಿ ನೋಟಿಸ್’ ಸಹ ವಿನೋದ ಅಣ್ವೇಕರ್ ಅವರ ಹೆಸರಿನಲ್ಲಿ ಜಾರಿಯಾಗಿಲ್ಲ!
ಇನ್ನೂ ವಿನೋದ ಅಣ್ವೇಕರ್ ಅವರು ತಮ್ಮ ಸೇವಾ ಅವಧಿಯಲ್ಲಿ ಸಾಕಷ್ಟು ಜನೋಪಯೋಗಿ ಕೆಲಸ ಮಾಡಿದ್ದಾರೆ. ತಮ್ಮ ಅಧಿಕಾರವನ್ನು ಬಳಸಿಕೊಂಡು ಶಾಲೆಗಳಿಗೆ ನೆರವು ನೀಡಿದ್ದಾರೆ. ಅನೇಕ ವರ್ಷಗಳಿಂದ ಬಾಕಿಯಿದ್ದ ಕಡತಗಳಿಗೆ ಇತಿಶ್ರೀ ಹಾಡಿದ್ದಾರೆ. ಆವಾಸ್ ಯೋಜನೆಗಳಲ್ಲಿ ನೈಜ ಪಲಾನುಭವಿಗಳನ್ನು ಗುರುತಿಸಿ ಅವರಿಗೆ ಮನೆ ಕಟ್ಟಿಸಿಕೊಟ್ಟಿದ್ದಾರೆ. ಬಡವರ ಮನೆಗೆ ಸ್ವಂತ ಸಂಬಳ ಖರ್ಚು ಮಾಡಿದ್ದಾರೆ. ಜೊಯಿಡಾ ಹಾಗೂ ಮುಂಡಗೋಡು ತಾಲೂಕಿನ ಹಿಂದುಳಿದ ಪ್ರದೇಶಗಳ ಬಗ್ಗೆ ಸರ್ಕಾರದ ಗಮನಸೆಳೆಯುವಲ್ಲಿಯೂ ವಿನೋದ ಅಣ್ವೇಕರ ಅವರ ಪಾತ್ರ ಅಪಾರ.
ಶಾಲಾ-ಕಾಲೇಜುಗಳಿಗೆ ತೆರಳಿ ತೆಂಗಿನ ಗಿಡ ನೆಡುವಿಕೆ, ಹಣ್ಣು-ಹಂಪಲು ಗಿಡ ವಿತರಣೆ ಅವರ ಪ್ರಮುಖ ಹವ್ಯಾಸ. ಬಿಡುವಿದ್ದಾಗಲೆಲ್ಲ ಅವರು ಜಿಲ್ಲೆಯ ವಿವಿಧ ಭಾಗಗಳಿಗೆ ತೆರಳಿ ತಮ್ಮದೇ ಆದ ರೀತಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ವಿನೋದ ಅಣ್ವೇಕರ್ ಅವರು ಈವರೆಗೂ ಪ್ರಶಸ್ತಿಗಳ ಹಿಂದೆ ಬಿದ್ದಿಲ್ಲ. ಅದಕ್ಕಾಗಿ ಪ್ರಯತ್ನವನ್ನು ನಡೆಸಿಲ್ಲ. ಅದಾಗಿಯೂ ಅವರ ಸೇವೆ ಗುರುತಿಸಿ ವೈಜ್ಞಾನಿಕ ಸಂಶೋಧನಾ ಪರಿಷತ್ತು `ಕಾಯಕ ರತ್ನ ಪ್ರಶಸ್ತಿ’ ಹಾಗೂ ಸರ್ಕಾರ `ಜಿಲ್ಲಾ ಮಟ್ಟದ ಪ್ರಶಸ್ತಿ’ ನೀಡಿ ಗೌರವಿಸಿದೆ.