ಭಟ್ಕಳ: ಮುರಿನಕಟ್ಟೆಯಲ್ಲಿದ್ದ ತಾಯಿ ಮಾರಿಕಾಂಬೆ ಗೊಂಬೆಗಳು ಕಾಣೆಯಾಗಿದೆ. ಇದರಿಂದ ಆ ಭಾಗದಲ್ಲಿ ಗೊಂದಲದ ವಾತಾವರಣ ಸೃಷ್ಠಿಯಾಗಿದೆ.
ಆಸರಕೇರಿ ಭಾಗದ ಹಿಂದೂ ಸಮುದಾಯದವರು ಭಟ್ಕಳ ಅರ್ಬನ್ ಬ್ಯಾಂಕ್ ಸಮೀಪದ ವನದುರ್ಗಿ ದೇವಸ್ಥಾನದ ಬಳಿ ಇದ್ದ ಅಮ್ಮನ ಹೊರೆ ಹಾಗೂ ಶಂಸುದ್ದಿನ್ ಸರ್ಕಲ್ ಬಳಿ ಇದ್ದ ದೇವಿಯ 2 ಅಮ್ಮನವರ ಗೊಂಬೆಯನ್ನು ಮುರಿನಕಟ್ಟೆಗೆ ಸಾಗಿಸಿದ್ದರು. ಬಳಿಕ ದೇವಿಯ ಮರದ ಗೊಂಬೆಗೆ ಪೂಜೆ ಸಲ್ಲಿಸಿ ಬಂದಿದ್ದರು.
ಮoಗಳವಾರ ರಾತ್ರಿ ಕಾರ್ಗದ್ದೆ, ಹುರುಳಿಸಾಲ, ಕಡವಿನಕಟ್ಟೆ ಹಾಗೂ ರಂಗಿನಕಟ್ಟೆಯ ಗ್ರಾಮಸ್ಥರು ಮುರಿನಕಟ್ಟೆಯಲ್ಲಿದ್ದ ಅಮ್ಮನವರ ಹೊರೆಯನ್ನು ವೆಂಕಟಾಪುರ ಗಡಿ ಭಾಗಕ್ಕೆ ಸಾಗಿಸುವ ತಯಾರಿ ನಡೆಸಿದ್ದರು. ಈ ವೇಳೆ ಮುರಿನಕಟ್ಟೆಯಲ್ಲಿದ್ದ 2 ದೇವಿಯ ಮರದ ಗೊಂಬೆ ಕಾಣಿಸಿಲ್ಲ. ಈ ವಿಷಯ ಎಲ್ಲಾ ಕಡೆ ಹರಡಿದ್ದರಿಂದ ಜನ ಜಮಾಯಿಸಿದರು.
ಪೊಲೀಸರು ಸ್ಥಳಕ್ಕೆ ಬಂದು ವಿಚಾರಿಸಿದರು. ಗಿಡ-ಗಂಟಿಗಳು ಬೆಳೆದಿದ್ದರಿಂದ ರಾತ್ರಿ ವೇಳೆ ಗೊಂಬೆ ಹುಡುಕಲು ಆಗಲಿಲ್ಲ. ಬೆಳಗ್ಗೆ ಹುಡುಕಾಟ ನಡೆಸುವುದಾಗಿ ಪೊಲೀಸರು ಹೇಳಿದರು. ಆದರೆ, ಬೆಳಗ್ಗೆ ಸಹ ಗೊಂಬೆಗಳು ಪತ್ತೆಯಾಗಲಿಲ್ಲ. ಈ ವೇಳೆ ಪೊಲೀಸರು ಹಾಗೂ ಸ್ಥಳೀಯರ ನಡುವೆ ಮಾತಿನ ಚಕಮಕಿಗಳು ನಡೆದವು.
ನಂತರ ಹಿರಿಯ ಪೊಲೀಸ್ ಅಧಿಕಾರಿಗಳು ಮುಖಂಡರಿಗೆ ಫೋನ್ ಮಾಡಿ ಒಂದು ವಾರದ ಒಳಗೆ ಈ ಪ್ರಕರಣ ತನಿಖೆ ನಡೆಸಿ ಕ್ರಮ ಜರುಗಿಸುವ ಭರವಸೆ ನೀಡಿದರು. ಹೀಗಾಗಿ ಹಿಂದು ಮುಖಂಡ ಗೋವಿಂದ ನಾಯ್ಕರು ಅಲ್ಲಿ ನೆರೆದಿದ್ದವರ ಮನವೊಲೈಸಿದರು. ಇದಾದ ಬಳಿಕ ಸ್ಥಳೀಯರು ಅಲ್ಲಿಂದ ಅಮ್ಮನರ ಹೊರೆಯನ್ನು ವೆಂಕಟಾಪುರ ಗಡಿಭಾಗಕ್ಕೆ ತಲುಪಿಸಿದರು.
`ಮಾರಿ ಹೊರೆಯನ್ನು ತೆಗೆಯುವ ಸಂಪ್ರದಾಯ ತಲತಲಾಂತರದಿ0ದ ನಡೆದುಕೊಂಡು ಬಂದಿದೆ. ಈ ಭಾಗದಿಂದ ಹೊರಡುವ ಅಮ್ಮನ ಹೊರೆ ಶಿರಸಿ ಮಾರಿಕಾಂಬಾ ದೇವಸ್ಥಾನಕ್ಕೆ ಹೋಗಿ ತಲುಪುತ್ತದೆ. ಎಲ್ಲಾ ಕಡೆಗಳಿಂದ ಬರುವ ಅಮ್ಮನ ಮುರಿನಕಟ್ಟೆಗೆ ಬಂದು ಅಲ್ಲಿಂದ ಮುಂದೆ ಸಾಗಿಸಲಾಗುತ್ತದೆ. ಈಗ ಇಲ್ಲಿ ಇದ್ದ 2 ಗೊಂಬೆ ನಾಪತ್ತೆಯಾಗಿದ್ದು ನಮ್ಮ ಧಾರ್ಮಿಕ ಭಾವನೆಗೆ ಧಕ್ಕೆಯಾಗಿದೆ’ ಎಂದು ಗೋವಿಂದ ನಾಯ್ಕ ವಿವರಿಸಿದರು.