ಕಾರವಾರ: ಹೊಟ್ಟೆ, ಕಾಲು, ಬೆನ್ನು ಸೇರಿ ಮೈ ತುಂಬ ಗೋವಾದ ಮದ್ಯದ ಬಾಟಲಿಗಳನ್ನು ಅಡಗಿಸಿಕೊಂಡು ಕರ್ನಾಟಕ ಪ್ರವೇಶಿಸಿದ್ದ ಇಬ್ಬರನ್ನು ಅಬಕಾರಿ ಸಿಬ್ಬಂದಿ ಹಿಡಿದಿದ್ದಾರೆ.
ಗೋವಾದ ಕದಂಬ ಬಸ್ ತಪಾಸಣೆ ನಡೆಸಿದ ಅಬಕಾರಿ ಸಿಬ್ಬಂದಿಗೆ ಕಾರವಾರ ಹೈಚರ್ಚ್ ರಸ್ತೆಯ ಪ್ರವೀಣ ಗೋಕರ್ಣ ಹಾಗೂ ಸೋನಾರವಾಡದ ಬಾಬು ಪಿಳ್ಳೆ ವಿಚಿತ್ರವಾಗಿ ಕಂಡರು. ದೊಡ್ಡದಾದ ಹೊಟ್ಟೆ, ಊದಿಕೊಂಡ ಕಾಲು ನೋಡಿದ ಅಬಕಾರಿ ನಿರೀಕ್ಷಕ ವಿಜಯ ಮಹಾಂತೇಶ ಅವರಿಗೆ ಆ ಇಬ್ಬರೂ ವಿಕಲಚೇತನರು ಎಂದೆನಿಸಿತು. ಅದಾಗಿಯೂ ಅವರ ಮೈ ಮುಟ್ಟಿದ ಅಬಕಾರಿ ಉಪನಿರೀಕ್ಷಕ ನಾಗರಾಜ ಕೊಟ್ಟಿಗಿ, ಮುಖ್ಯ ಪೇದೆ ಕುಂದಾ ನಾಯ್ಕಗೆ ಅಚ್ಚರಿ ಕಾದಿತ್ತು. ಅಬಕಾರಿ ಸಿಬ್ಬಂದಿ ಕೃಷ್ಣ ನಾಯ್ಕ, ವಾಹನ ಚಾಲಕ ರವೀಂದ್ರ ನಾಯ್ಕ ತಪಾಸಣೆ ನಡೆಸಿದಾಗ ಮದ್ಯದ ಬಾಟಲಿಗಳು ಹೊರ ಬಿದ್ದವು.
ಈ ಇಬ್ಬರು ಕಾಲು, ಕೈ, ಹೊಟ್ಟೆ ಎಲ್ಲ ಕಡೆ ಮದ್ಯದ ಬಾಟಲಿ ಕಟ್ಟಿಕೊಂಡು ಮೇಲಿಂದ ಅಂಗಿ ಹಾಕಿ ಕುಳಿತಿದ್ದರು. ಬಾಟಲಿ ಬೀಳದಂತೆ ಹಗ್ಗದಿಂದ ಕಟ್ಟಿಕೊಂಡಿದ್ದರು. ಈ ಇಬ್ಬರಿಂದ ಒಟ್ಟು 52,400 ರೂ ಮೌಲ್ಯದ 65.25 ಲೀಟರ್ ಗೋವಾ ಮದ್ಯವನ್ನು ಅಬಕಾರಿ ಸಿಬ್ಬಂದಿ ವಶಕ್ಕೆ ಪಡೆದರು. ಜೊತೆಗೆ ಇಬ್ಬರನ್ನು ಜೈಲಿಗೆ ಕಳುಹಿಸಿದರು. ಈ ಇಬ್ಬರೂ ಹೊಸ ವರ್ಷದ ಅವಧಿಯಲ್ಲಿ ಅಗ್ಗದ ಮದ್ಯವನ್ನು ದುಬಾರಿ ಬೆಲೆಗೆ ಮಾರಲು ಚಿಂತನೆ ನಡೆಸಿದ್ದರು. ಆದರೆ, ಕಾರವಾರ ಬಸ್ ನಿಲ್ದಾಣದ ಬಳಿ ಸಿಕ್ಕಿಬಿದ್ದರು.