ಯಲ್ಲಾಪುರ: ಯಕ್ಷಗಾನ ಹಾಗೂ ತಾಳಮದ್ದಲೆ ಕ್ಷೇತ್ರದ ಸಾಧಕರ ಬರಹ ಪ್ರಕಟಿಸಿ ಅವರನ್ನು ಸಮಾಜಕ್ಕೆ ಪರಿಚಯಿಸುತ್ತಿರುವ `ಕರ್ನಾಟಕ ಕಲಾ ಸನ್ನಿಧಿ’ ಇದೀಗ ಸಾಧಕರಿಗೆ ಸನ್ಮಾನಿಸುವ ಕಾರ್ಯಕ್ರಮವನ್ನು ಆಯೋಜಿಸಿದೆ. ಯಾವುದೇ ಪ್ರತಿಫಲ ಬಯಸದೇ ಪ್ರಚಾರದ ಹಂಗಿಲ್ಲದೇ ಸೇವೆ ಸಲ್ಲಿಸುತ್ತಿರುವವರಿಗಾಗಿ ಈ ಕಾರ್ಯಕ್ರಮವನ್ನು ಸಂಘಟಿಸಲಾಗಿದೆ.
ಕಳೆದ 4 ವರ್ಷಗಳಿಂದ `ಕರ್ನಾಟಕ ಕಲಾ ಸನ್ನಿಧಿ’ ಕಲಾವಿದರ ಕುರಿತು ನಿರಂತರ ಲೇಖನ ಪ್ರಕಟಿಸುತ್ತಿದೆ. ವಿವಿಧ ಸಾಮಾಜಿಕ ಜಾಲತಾಣ ಸೇರಿ `S News Digitel’ನಲ್ಲಿ ಸಹ `ಯಕ್ಷಶ್ರಿ’ ಹೆಸರಿನ ಅಡಿ ಲೇಖನಗಳು ಪ್ರಸಾರವಾಗುತ್ತಿವೆ. ಕರ್ನಾಟಕ ಕಲಾ ಸನ್ನಿಧಿಯ ಪದಾಧಿಕಾರಿಗಳು 50 ಕಲಾವಿದರನ್ನು ಸಂದರ್ಶಿಸಿದ ಸನ್ನಿವೇಶದಲ್ಲಿ ಎಲ್ಲರನ್ನು ಒಂದೇ ಕಡೆ ಸೇರಿಸಿ ಗೌರವಿಸಿದ್ದರು. ಆ ವೇಳೆ ಎಲ್ಲಾ ಲೇಖನಗಳನ್ನು ಸಂಗ್ರಹಿಸಿ `ದಿವ್ಯ ದೀವಟಿಕೆ’ ಎಂಬ ಪುಸ್ತಕ ಹೊರತರಲಾಗಿದ್ದು, ಅದರ ಬಿಡುಗಡೆ ಕಾರ್ಯಕ್ರಮ ಸಹ ಇದೀಗ ನಡೆಯಲಿದೆ.
ಯಲ್ಲಾಪುರ ತಾಲೂಕಿನ ಆನಗೋಡಿನ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಡಿ 29ರ ಮಧ್ಯಾಹ್ನ 3 ಗಂಟೆಯಿ0ದ ಈ ಕಾರ್ಯಕ್ರಮ ಶುರುವಾಗಲಿದೆ. `ನಿಸ್ವಾರ್ಥ ಕಲಾ ಸೇವಕರಿಗೆ ಗೌರವ ಸಮರ್ಪಣೆ, ದಿವ್ಯ ದೀವಟಿಗೆ ಪುಸ್ತಕ ಲೋಕಾರ್ಪಣೆ ಹಾಗೂ ಗಾನ ಸಂಜೆಯನ್ನು ಆಯೋಜಿಸಲಾಗಿದೆ’ ಎಂದು ಕರ್ನಾಟಕ ಕಲಾ ಸನ್ನಿಧಿ ಅಧ್ಯಕ್ಷ ಶ್ರೀಧರ ಭಟ್ಟ ಅಣಲಗಾರ ಸುದ್ದಿಗಾರರಿಗೆ ವಿವರಿಸಿದರು.
`ಕಲಾವಿದರನ್ನು ಸಂದರ್ಶಿಸಿ ಲೇಖನ ಪ್ರಕಟಿಸುವ ಸರಣಿ ಮುಂದುವರಿದಿದ್ದು, ಈ ಬಾರಿ 45 ಕಲಾವಿದರನ್ನು ಸಂದರ್ಶಿಸಲಾಗಿದೆ. ಈ 45 ಕಲಾವಿದರು ಆ ದಿನ ಹಾಜರಿರಲಿದ್ದಾರೆ. ಸಭಾ ಕಾರ್ಯಕ್ರಮವನ್ನು ಶ್ರೀಮಾತಾ ವಿವಿಧೋದ್ದೇಶ ಸೌಹಾರ್ದ ಸಹಕಾರಿಯ ಅಧ್ಯಕ್ಷ ಜಿ ಎನ್ ಹೆಗಡೆ ಹಿರೇಸರ ಉದ್ಘಾಟಿಸಲಿದ್ದಾರೆ. ಕರ್ನಾಟಕ ಕಲಾ ಸನ್ನಿಧಿಯ ಕೋಶಾಧ್ಯಕ್ಷ ದಿನೇಶ ಭಟ್ಟ ಯಲ್ಲಾಪುರ ಅಧ್ಯಕ್ಷತೆ ವಹಿಸಲಿದ್ದಾರೆ’ ಎಂದು ತಿಳಿಸಿದರು.
`ದಿವ್ಯ ದೀವಟಿಗೆ ಪುಸ್ತಕವನ್ನು ಕಲಾವಿದ ವಿನಾಯಕ ಭಟ್ಟ ಶೇಡಿಮನೆ ಲೋಕಾರ್ಪಣೆಗೊಳಿಸಲಿದ್ದಾರೆ. ಬರಹಗಾರ ದತ್ತಾತ್ರೇಯ ಕಣ್ಣಿಪಾಲ ಪುಸ್ತಕ ಪರಿಚಯಿಸಲಿದ್ದಾರೆ. ದೇವಸ್ಥಾನದ ಅಧ್ಯಕ್ಷ ಗಣಪತಿ ಮಾನಿಗದ್ದೆ, ಗ್ರಾ ಪಂ ಅಧ್ಯಕ್ಷೆ ಮೀನಾಕ್ಷಿ ಭಟ್ಟ, ಟಿಎಂಎಸ್ ನಿರ್ದೇಶಕ ವೆಂಕಟರಮಣ ಭಟ್ಟ ಕಿರಕುಂಭತ್ತಿ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಪ್ರತಿಭಾನ್ವಿತ ಕಲಾವಿದ ಶ್ರೀವತ್ಸ ಗುಡ್ಡೆದಿಂಬ ಅವರಿಗೆ ಕಲಾಸನ್ನಿಧಿ ಪುರಸ್ಕಾರ ನೀಡಿ ಗೌರವಿಸಲಾಗುತ್ತದೆ. ಅದಾದ ಮೇಲೆ ಸ್ಥಳೀಯ ಕಲಾವಿದರಿಂದ ಗಾನ ಸಂಜೆ ಕಾರ್ಯಕ್ರಮ ನಡೆಯಲಿದೆ ಎಂದು ಸಂಸ್ಥೆಯ ಕಾರ್ಯದರ್ಶಿ ದೀಪಕ ಭಟ್ಟ ಕುಂಕಿ,ಸಹ ಕಾರ್ಯದರ್ಶಿ ದಿನೇಶ ಗೌಡ ಮಾವಿನಮನೆ ವಿವರಿಸಿದರು.
ನೀವು ಬನ್ನಿ.. ನಿಮ್ಮವರನ್ನು ಕರೆತನ್ನಿ!



