ಹೊನ್ನಾವರ: ಚಲಿಸುತ್ತಿದ್ದ ರಿಕ್ಷಾಗೆ ದಿಢೀರ್ ಆಗಿ ಪುಟ್ಟ ಮಗು ಅಡ್ಡ ಬಂದಿದ್ದು, ಆ ಮಗುವನ್ನು ಉಳಿಸುವ ಗಡಿಬಿಡಿಯಲ್ಲಿ ರಿಕ್ಷಾ ಒಳಗಿದ್ದ ಮಗು ಸಾವನಪ್ಪಿದೆ.
ಶನಿವಾರ ಮಧ್ಯಾಹ್ನ ಹೊನ್ನಾವರದ ಸರಳಗಿಯ ರಿಕ್ಷಾ ಚಾಲಕ ಮಹಮದ್ ಸಾಲಿಕ್ ಅವರು ಸರಳಗಿಯ ಮುಸ್ಲೀಂ ಕೇರಿಯ ಅಫ್ರಿನಾಜ್ ಅವರನ್ನು ರಿಕ್ಷಾದಲ್ಲಿ ಕರೆದೊಯ್ಯುತ್ತಿದ್ದರು. ಅಫ್ರಿನಾಜ್ ಅವರ 3 ವರ್ಷದ ಮಗ ಅಬ್ದುಲ್ ರೆಹಮಾನ್ ಸಹ ರಿಕ್ಷಾ ಏರಿದ್ದರು.
ಉಪ್ಪೋಣಿಯಿಂದ ಸರಳಗಿ ಕಡೆ ರಿಕ್ಷಾ ಸಂಚರಿಸುತ್ತಿತ್ತು. ಉಪ್ಪೋಣಿ ತೂಗು ಸೇತುವೆ ಬಳಿ ರಿಕ್ಷಾ ವೇಗವಾಗಿ ಚಲಿಸಿದ್ದು, ಈ ವೇಳೆ ರಿಕ್ಷಾಗೆ ಅಡ್ಡವಾಗಿ ಮಗುವೊಂದು ಬಂದಿತು. ಆ ಮಗುವಿಗೆ ರಿಕ್ಷಾ ಗುದ್ದುವುದನ್ನು ತಪ್ಪಿಸುವುದಕ್ಕಾಗಿ ಮಹಮದ್ ಸಾಲಿಕ್ ಒಮ್ಮೆಗೆ ಬ್ರೆಕ್ ಅದುಮಿದರು.
ಪರಿಣಾಮ ರಿಕ್ಷಾ ಪಲ್ಟಿಯಾಗಿದ್ದು, ಅದರೊಳಗಿದ್ದ ಅಬ್ದುಲ್ ಕಿವಿಯಿಂದ ರಕ್ತ ಬರಲು ಶುರುವಾಯಿತು. ಮೈ-ಕೈಗೆ ಸಹ ಗಾಯವಾಗಿದ್ದರಿಂದ ತಕ್ಷಣ ಅಬ್ದುಲ್’ನನ್ನು ಹೊನ್ನಾವರದ ಸೆಂಟ್ ಇಗ್ನೇಶನ್ ಆಸ್ಪತ್ರೆಗೆ ಕರೆ ತರಲಾಯಿತು. ಆದರೆ, ಈಗಾಗಲೇ ಅಬ್ದುಲ್ ಸಾವನಪ್ಪಿರುವ ಬಗ್ಗೆ ವೈದ್ಯರು ಘೋಷಿಸಿದರು.
ರಿಕ್ಷಾ ಪಲ್ಟಿಯಾಗಿದ್ದರಿಂದ ಚಾಲಕ ಮಹಮದ್ ಸಾಲಿಕ್’ಗೆ ಸಹ ಗಾಯವಾಗಿದೆ. ಪೊಲೀಸ್ ಪ್ರಕರಣ ದಾಖಲಾಗಿದೆ.