ಶಿರಸಿ: ಸರ್ಕಾರಿ ಆಸ್ಪತ್ರೆ ಕಾಮಗಾರಿ ಬಗ್ಗೆ ಸಾಮಾಜಿಕ ಕಾರ್ಯಕರ್ತ ಅನಂತಮೂರ್ತಿ ಹೆಗಡೆ ಅನುಮಾನ ವ್ಯಕ್ತಪಡಿಸಿದ್ದಾರೆ. ಶಿರಸಿಯ ಹೈಟೆಕ್ ಆಸ್ಪತ್ರೆಯ ಒಳಹೋರಣಗಳ ಬಗ್ಗೆ ಒಂದು ವಾರದಲ್ಲಿ ಜನರ ಮುಂದಿಡದಿದ್ದರೆ ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಅವರು ಎಚ್ಚರಿಸಿದ್ದಾರೆ.
`ಕಳೆದ ಒಂದು ವರ್ಷದಿಂದ ಸರ್ಕಾರಿ ಆಸ್ಪತ್ರೆ ಕಾಮಗಾರಿ ಸರಿಯಾಗಿಲ್ಲ. ಕಾಟಾಚಾರಕ್ಕೆ ಇಲ್ಲಿ ಕೆಲಸ ಮಾಡುತ್ತಿದ್ದು, ಹೈಟೆಕ್ ಆಸ್ಪತ್ರೆ ಅಪಾಯದಲ್ಲಿದೆ’ ಎಂದವರು ಹೇಳಿದ್ದಾರೆ. ಉಸ್ತುವಾರಿ ಸಚಿವ ಮಂಕಾಳು ವೈದ್ಯ ಹಾಗೂ ಶಾಸಕ ಭೀಮಣ್ಣ ನಾಯ್ಕ ಆಸ್ಪತ್ರೆ ಅಭಿವೃದ್ಧಿ ಕಾಮಗಾರಿಯ ಸತ್ಯಾಸತ್ಯತೆಯನ್ನು ಜನರ ಮುಂದಿಡಬೇಕು. ಇಲ್ಲವಾದಲ್ಲಿ ಜ 13ರಂದು ಉಪವಾಸ ಕೂರುವುದು ಖಚಿತ’ ಎಂದವರು ಸುದ್ದಿಗೊಷ್ಠಿ ಮೂಲಕ ಎಚ್ಚರಿಸಿದ್ದಾರೆ.
ಶಾಸಕರೇ ಸತ್ಯ ಹೇಳ್ಬಿಡಿ!
`ಆಸ್ಪತ್ರೆಯ ಹಣಕಾಸಿನ ಅಂದಾಜಿನ ಅಂಕಿ-ಸoಖ್ಯೆಗಳು ಸರಿಯಾಗಿಲ್ಲ. ಪ್ಲಾಸ್ಟರ್, ಟೈಲ್ಸ ಅಳವಡಿಕೆ, ವಿದ್ಯುತ್, ಪ್ಲಂಬಿoಗ್ ಹಾಗೂ ಪೀಠೋಪಕರಣಗಳ ಅಳವಡಿಗೆ ಸೇರಿ 40 ಕೋಟಿ ಎಂದು ಅಂದಾಜಿಸಲಾಗಿತ್ತು. ಆಸ್ಪತ್ರೆಯ ಯಂತ್ರೋಪಕರಣಗಳಿಗೆ ಮೊದಲು 60 ಕೋಟಿ ಎಂದು ಅಂದಾಜಿಸಲಾಗಿತ್ತು. ಕೊನೆಗೆ ಒಮ್ಮೆ 32 ಕೋಟಿ ಎಂದು ಹೇಳಲಾಗಿದ್ದು, ದೀಗ ಸರ್ಕಾರ 6 ಕೋಟಿ ಕೊಡಲಿದೆ ಎಂಬ ಮಾಹಿತಿಯಿದೆ. ಉಳಿದ ಹಣ ಕೊಡುವವರು ಯಾರು? ಎಂದು ಬಹಿರಂಗಪಡಿಸಬೇಕು’ ಎಂದು ಆಗ್ರಹಿಸಿದರು.
`20 ದಿನದ ಹಿಂದೆ ಆಸ್ಪತ್ರೆಯ ಬಗ್ಗೆ ಶಾಸಕರು ಹಾಗೂ ಸಚಿವರಲ್ಲಿ ಮಾಹಿತಿ ಕೋರಲಾಗಿತ್ತು. ಆದರೆ, ಈವರೆಗೂ ಅವರು ಸತ್ಯವನ್ನು ಜನರ ಮುಂದಿಟ್ಟಿಲ್ಲ’ ಎಂದು ದೂರಿದರು. `ಒಂದು ವಾರದ ಒಳಗೆ ಆಸ್ಪತ್ರೆಯ ಬಗ್ಗೆ ಭೀಮಣ್ಣ ನಾಯ್ಕ ಅವರು ಸಮಗ್ರ ವರದಿ ಕೊಡಬೇಕು. ಇಲ್ಲವಾದಲ್ಲಿ ಅವರ ಕಚೇರಿ ಮುಂದೆ ಜನವರಿ 13ರಿಂದ ಉಪವಾಸ ಸತ್ಯಾಗ್ರಹದ ಮೂಲಕ ಹೋರಾಟ ನಡೆಸುವುದು ಖಚಿತ’ ಎಂದು ಘೋಷಿಸಿದರು.