ಭಟ್ಕಳ: ಮುರುಡೇಶ್ವರ ಕಡಲತೀರದಲ್ಲಿ ಬೋಟು ನಿಲುಗಡೆಗೆ ಸರ್ಕಾರ ಅನುಮತಿ ನೀಡಿದ್ದು, ಇದೀಗ ಅದೇ ಸರ್ಕಾರದ ಅಧಿಕಾರಿಗಳು ನಿಲುವು ಬದಲಿಸಿ ಅಲ್ಲಿದ್ದವರನ್ನು ಒಕ್ಕಲೆಬ್ಬಿಸಿದ್ದಾರೆ!
ಡಿ 12ರಂದು ವೆಂಕಟೇಶ ಹರಿಕಂತ್ರ ಅವರಿಗೆ ಪ್ರವಾಸೋದ್ಯಮ ಇಲಾಖೆ ಕಡಲತೀರದಲ್ಲಿ ಬೋಟುಗಳ ನಿಲುಗಡೆಗೆ ಸ್ಥಳಾವಕಾಶ ನೀಡಿದೆ. ಅಹಿತಕರ ಘಟನೆ ನಡೆಯದಂತೆ ಎಚ್ಚರವಹಿಸಲು ಸಿಸಿ ಕ್ಯಾಮರಾ ಅಳವಡಿಸುವಂತೆಯೂ ಸೂಚನೆ ನೀಡಿದೆ. ಆದರೆ. ಡಿ 29ರಂದು ಏಕಾಏಕಿ ಅಲ್ಲಿದ್ದ ಬೋಟು ಹಾಗೂ ಸಾಮಗ್ರಿಗಳನ್ನು ತೆರವು ಮಾಡಿರುವುದು ಅಧಿಕಾರಿಗಳು ಸೂಚಿಸಿದ ಸ್ಥಳದಲ್ಲಿ ಹಾಕಲಾದ ಸಿಸಿ ಕ್ಯಾಮರಾದಲ್ಲಿಯೇ ಸೆರೆಯಾಗಿದೆ.
ಮುರುಡೇಶ್ವರದಲ್ಲಿ ಓಶಿಯನ್ ಅಡ್ವೇಂಚರ್ ಹೆಸರಿನಲ್ಲಿ ವೆಂಕಟೇಶ ಹರಿಕಂತ್ರ ಅವರು ಜಲಸಾಹಸ ಚಟುವಟಿಕೆ ನಡೆಸುತ್ತಾರೆ. 5 ವರ್ಷದ ಅವಧಿಗೆ ಈ ಚಟುವಟಿಕೆ ನಡೆಸಲು ಅವರಿಗೆ ಲೀಸ್ ನೀಡಲಾಗಿದೆ. ಪ್ರವಾಸಿಗರ ಸುರಕ್ಷತೆ ಹಾಗೂ ಬೋಟುಗಳ ನಿಲುಗಡೆಗಾಗಿ ಅವರು ಕಡಲತೀರದಲ್ಲಿ 50*50ರ ಜಾಗ ಕೋರಿದ್ದು, ಹಲವು ಷರತ್ತುಗಳನ್ನು ಹಾಕಿ ಪ್ರವಾಸೋದ್ಯಮ ಇಲಾಖೆ 30*30ರ ಜಾಗ ನೀಡಿದೆ. ಆ ಜಾಗದಲ್ಲಿದ್ದ ಸಾಮಗ್ರಿಗಳನ್ನು ಇದೀಗ ಉಪವಿಭಾಗಾಧಿಕಾರಿ ಸೂಚನೆ ಮೇರೆಗೆ ತೆರವು ಮಾಡಲಾಗಿದೆ.

ದೋಣಿ ನಿಲುಗಡೆಗೆ ನೀಡಿದ್ದ ಅನುಮತಿ ಪತ್ರ
ಪ್ರವಾಸಿಗರಿಗೆ ಕೂರಲು ಆಸನ ವ್ಯವಸ್ಥೆ, ಅಗತ್ಯ ನಾಮಫಲಕ ಅಳವಡಿಕೆ, ಸ್ವಚ್ಛತೆ ಕಾಪಾಡಿಕೊಳ್ಳುವಿಕೆ ಸೇರಿ ಸರ್ಕಾರ ವಿಧಿಸಿದ ಎಲ್ಲಾ ಷರತ್ತು ಒಪ್ಪಿದ್ದರೂ ಏಕಾಏಕಿ ತೆರವು ಮಾಡಿದಕ್ಕೆ ಆಕ್ಷೇಪ ವ್ಯಕ್ತವಾಗಿದೆ. ಅಧಿಕಾರಿಗಳ ಈ ನಡೆಯಿಂದ ಪ್ರವಾಸೋದ್ಯಮಕ್ಕಾಗಿ ಹೂಡಿಕೆ ಮಾಡಿದ್ದ ಮೀನುಗಾರನಿಗೂ ನಷ್ಟವಾಗಿದೆ.



