ಶಿರಸಿ: ಲಗೇಜ್ ವಾಹನದಲ್ಲಿ ಸಾಗವಾನಿ ನಾಟಾ ಸಾಗಿಸುತ್ತಿದ್ದ ಜಾಕೀರ್ ಅಹ್ಮದ್ ಅರಣ್ಯ ಸಿಬ್ಬಂದಿಗೆ ಸಿಕ್ಕಿ ಬಿದ್ದಿದ್ದು, ಅಧಿಕಾರಿಗಳು ನಾಟಾಗಳ ಜೊತೆ ಆತನನ್ನು ವಶಕ್ಕೆ ಪಡೆದಿದ್ದಾರೆ. ಅಕ್ರಮ ನಾಟಾ ಸಾಗಾಟದ ವಾಹನವನ್ನು ಸಹ ಜಪ್ತು ಮಾಡಿದ್ದಾರೆ.
ಶನಿವಾರ ರಾತ್ರಿ ಶಿರಸಿ ರಾಜೀವ ನಗರದ ಜಾಕೀರ ಅಹಮ್ಮದ್ ಮೂರು ಸಾಗವಾನಿ ನಾಟಾವನ್ನು ಸಾಗಿಸುತ್ತಿದ್ದಾಗ ಅದನ್ನು ಅರಣ್ಯ ಸಿಬ್ಬಂದಿ ತಡೆದರು. ನಾಟಾ ಸಾಗಾಟಕ್ಕೆ ಪಡೆದ ಅನುಮತಿ ಕೇಳಿದರು. `ಅನುಮತಿ ಪತ್ರ ಇಲ್ಲ’ ಎಂದು ತಿಳಿಸಿದಾಗ ವಿಚಾರಣೆಗೆ ಒಳಪಡಿಸಿದರು. ಅರಣ್ಯದಿಂದ ಅಕ್ರಮವಾಗಿ ನಾಟಾ ಸಾಗಾಟ ಖಚಿತವಾದ ಹಿನ್ನಲೆ ನಾಟಾ ಜೊತೆ ಜಾಕೀರನನ್ನು ವಶಕ್ಕೆ ಪಡೆದರು.
ಬನವಾಸಿ ವಲಯ ಅರಣ್ಯಾಧಿಕಾರಿ ಭವ್ಯ ನಾಯ್ಕ ಈ ಕಾರ್ಯಾಚರಣೆಯಲ್ಲಿದ್ದರು. ಎಕ್ಕಂಬಿ ಉಪ ವಲಯ ಅರಣ್ಯಾಧಿಕಾರಿ ರವೀಂದ್ರ ಕರ್ನಲ್, ದಾಸನಕೊಪ್ಪ ಶಾಖೆಯ ಉಪವಲಯ ಅರಣ್ಯಾಧಿಕಾರಿ ಕಾರ್ತಿಕ ನಾರ್ವೇಕರ್, ಬನವಾಸಿ ಶಾಖೆಯ ಉಪ ವಲಯ ಅರಣ್ಯಾಧಿಕಾರಿ ಮಂಜುನಾಥ ಗಂಗೆಮತ ಅಕ್ರಮ ನಾಟಾ ಸಾಗಾಟವನ್ನು ತಡೆದರು.