ಶಿರಸಿ: 2024ರ ಸೆಪ್ಟೆಂಬರ್ ಅಂತ್ಯದವರೆಗಿನ ಲೆಕ್ಕಾಚಾರದ ಪ್ರಕಾರ ವಿದೇಶಗಳಿಂದ ಭಾರತಕ್ಕೆ ಅಕ್ರಮವಾಗಿ ಆಮದಾಗಿದ್ದ 264.26 ಕೋಟಿ ರೂ. ಮೌಲ್ಯದ ಅಡಿಕೆಯನ್ನು ಸಿಬಿಐಸಿ ವಶಕ್ಕೆ ಪಡೆದಿದೆ. ಸುಳ್ಳು ತೆರಿಗೆ ಹಾಗೂ ಲೆಕ್ಕಾಚಾರದ ಮೂಲಕ ಭಾರತಕ್ಕೆ ಬಂದಿದ್ದ 9.75 ಕೋಟಿ ರೂ ಮೌಲ್ಯದ 168.45 ಮೆಟ್ರಿಕ್ ಟನ್ ಅಡಕೆಯ ಜೊತೆ 7 ಕಂಟೇನರ್’ಗಳನ್ನು ಸಹ ಕಳೆದ ಅಗಷ್ಟ್ ತಿಂಗಳಿನಲ್ಲಿ ಚೆನೈ ಬಂದರಿನಲ್ಲಿ ವಶಕ್ಕೆ ಪಡೆಯಲಾಗಿದೆ.
ಈ ಬಗ್ಗೆ ಕೇಂದ್ರ ಹಣಕಾಸು ಇಲಾಖೆ ರಾಜ್ಯ ಸಚಿವ ಪಂಕಜ್ ಚೌಧರಿ ಅವರು ಉತ್ತರ ಕನ್ನಡ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಪತ್ರ ಬರೆದು ಮಾಹಿತಿ ನೀಡಿದ್ದಾರೆ. `ವಿದೇಶದಿಂದ ಭಾರತಕ್ಕೆ ಅಕ್ರಮ ಅಡಿಕೆ ಬಾರದಂತೆ ತಡೆಯಲು ಕೇಂದ್ರ ಸರ್ಕಾರ ಕಟ್ಟುನಿಟ್ಟಿನ ಕ್ರಮ ಜರುಗಿಸಿದೆ. ಭಾರತ – ಮ್ಯಾನ್‌ಮಾರ್ ಮತ್ತು ಭಾರತ-ಬಾಂಗ್ಲಾದೇಶ ಗಡಿಯಲ್ಲಿ ಕಟ್ಟೆಚ್ಚರವಹಿಸಲಾಗಿದೆ’ ಎಂದು ಈ ಪತ್ರದಲ್ಲಿ ವಿವರಿಸಲಾಗಿದೆ.
`ಅಡಕೆಗೆ ನಿಗದಿಯಾಗಿರುವ ಕನಿಷ್ಠ ಆಮದು ಬೆಲೆ ಪರಿಷ್ಕರಣೆ ಸಂಬoಧ ಕೃಷಿ ಮತ್ತು ಕೃಷಿಕ ಕಲ್ಯಾಣ ಸಚಿವಾಲಯಕ್ಕೆ ಶಿಫಾರಸು ಮಾಡಲಾಗಿದೆ. ಎಂಐಪಿ ಪರಿಷ್ಕರಣೆ ಸಂಬoಧ ವಿದೇಶಿ ವ್ಯವಹಾರಗಳ ನಿರ್ದೇಶನಾಲಯ ಪರಿಶೀಲನೆಗೆ ಸೂಚನೆ ನೀಡಲಾಗಿದೆ’ ಎಂದು ಸಚಿವ ಪಂಕಜ್ ಚೌಧರಿ ಅವರು ಮಾಹಿತಿ ನೀಡಿದ್ದಾರೆ. ಅಡಿಕೆ ಭವಿಷ್ಯದ ಬಗ್ಗೆ ಆತಂಕ ವ್ಯಕ್ತಪಡಿಸಿ ಅಗಷ್ಟ್ ತಿಂಗಳಿನಲ್ಲಿ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಪತ್ರ ಬರೆದಿದ್ದರು. ಅದಕ್ಕೆ ಪ್ರತಿಕ್ರಿಯೆ ನೀಡಿದ ಸಚಿವರು ಈ ಎಲ್ಲಾ ವಿಷಯ ವಿವರಿಸಿದ್ದಾರೆ.