ಸಿದ್ದಾಪುರ: `ಅಸ್ತಿತ್ವವೇ ಇಲ್ಲದ ಸಮಿತಿಯೂ ಅರಣ್ಯವಾಸಿಗಳ ಬಳಿ ಮೂರು ತಲೆಮಾರಿನ ದಾಖಲೆ ಒದಗಿಸುವಂತೆ ಒತ್ತಾಯಿಸುತ್ತಿದೆ. ಇದು ಕಾನೂನುಬಾಹಿರ’ ಎಂದು ಅರಣ್ಯವಾಸಿಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಮಂಗಳವಾರ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ನೇತೃತ್ವದಲ್ಲಿ ಶಿರಸಿ ಉಪವಿಭಾಗ ಅರಣ್ಯ ಹಕ್ಕು ಸಮಿತಿ ಅಧ್ಯಕ್ಷರಾದ ಕಾವ್ಯರಾಣಿ ಕೆ ವಿ ಅವರಿಗೆ ಈ ಬಗ್ಗೆ ಮನವರಿಕೆ ಮಾಡುವ ಪ್ರಯತ್ನ ನಡೆಯಿತು. ಸಿದ್ದಾಪುರ ತಹಶೀಲ್ದಾರ್ ಕಚೇರಿಗೆ ಜಮಾಯಿಸಿದ ನೂರಾರು ಜನ ಆಕ್ಷೇಪಣಾ ಪತ್ರ ಸಲ್ಲಿಸಿದರು.
`ಪುನರ್ ಪರಿಶೀಲನೆ ನೆಪದಲ್ಲಿ ಅರಣ್ಯವಾಸಿಗಳಿಗೆ ತೊಂದರೆ ನೀಡಲಾಗುತ್ತಿದೆ. ನಿಯಮದಲ್ಲಿ ಇಲ್ಲದ ದಾಖಲೆಗಳನ್ನು ಕೇಳಲಾಗುತ್ತಿದೆ’ ಎಂದು ಅತಿಕ್ರಮಣದಾರರು ದೂರಿದರು. `ಕಾನೂನು ವ್ಯತಿರಿಕ್ತವಾಗಿ ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಅರ್ಜಿ ಪುನರ್ ಪರಿಶೀಲನಾ ಕಾರ್ಯ ಜರುಗಿಸುವುದು ಸಮಂಜಸವಲ್ಲ. ಇಂತಹ ಪ್ರಕ್ರಿಯೆಯನ್ನು ತಡೆಹಿಡಿಯಬೇಕು’ ಎಂದು ರವೀಂದ್ರ ನಾಯ್ಕ ಆಗ್ರಹಿಸಿದರು.
ಈ ಸಭೆಯಲ್ಲಿ ಹರಿಹರ ನಾಯ್ಕ ಓಂಕಾರ್ ಸೀತರಾಮ ಗೌಡ ಹುಕ್ಕಳಿ, ವಿನಾಯಕ ನಾಯ್ಕ ಕಾನಗೋಡ, ದಿನೇಶ ಬೇಡ್ಕಣಿ, ರಾಘವೇಂದ್ರ ಕವಂಚೂರು, ವಿದ್ಯಾ ನಾಯ್ಕ ಹಾರ್ಸಿಕಟ್ಟಾ, ಸತೀಶ ತ್ಯಾಗಲಿ, ನಾರಾಯಣ ಜಿ ನಾಯ್ಕ, ನಾಗೇಶ ಕನ್ನಾ ಕಲ್ಯಾಣಪುರ್, ಜಯಂತ ಬಿ ನಾಯ್ಕ, ಆರ್ ಟಿ ನಾಯ್ಕ, ಮಹಮ್ಮದ್ ರಫೀಕ ಸಾಬ, ಅಬ್ದುಲ್ ಕಾದರ ಶೇಖ್ ಇತರರು ಇದ್ದರು.



