ಸಿದ್ದಾಪುರ: ಪುಡಿಗಾಸಿನ ಆಸೆಗೆ ಪಿಗ್ಮಿ ನಡೆಸಿ ಬದುಕು ಕಟ್ಟಿಕೊಂಡಿದ್ದ ವೃದ್ಧೆಯನ್ನು ಕೊಂದ ಅಭಿಜಿತ್ ಮಡಿವಾಳ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಸ್ಥಳ ಮಹಜರು ನಡೆಸುವ ವೇಳೆ ಸ್ಥಳಕ್ಕೆ ಬಂದ ಜನ ಅಭಿಜಿತ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಸೊರಬ ರಸ್ತೆಯ ಡಿ ಸಿಲ್ವಾ ವೈನ್ಪ ಬಳಿ ಗೀತಾ ಹುಂಡೆಕರ್ ಒಂಟಿಯಾಗಿ ವಾಸಿಸುತ್ತಿದ್ದರು. 75ವರ್ಷದ ಅವರು ಪಿಗ್ಮಿ ಮಾಡಿ ಬದುಕು ಕಟ್ಟಿಕೊಂಡಿದ್ದರು. ಅವರಲ್ಲಿನ ಹಣ ಹಾಗೂ ಒಂಟಿ ಜೀವನದ ಬಗ್ಗೆ ಅರಿತಿದ್ದ ಕೊಂಡ್ಲಿಯ ಅಭಿಜಿತ್ ಮಡಿವಾಳ ಸೋಮವಾರ ರಾತ್ರಿ ಅವರ ಮನೆಗೆ ನುಗ್ಗಿ ಕೊಲೆ ಮಾಡಿದ್ದ. ಗೀತಾ ಅವರು ಸಾವನಪ್ಪಿರುವುದು ಬುಧವಾರ ಬೆಳಕಿಗೆ ಬಂದಿತ್ತು.
ಸಾವಿನ ಸಂಗತಿ ಅರಿವಿಗೆ ಬಂದ ತಕ್ಷಣ ಪೊಲೀಸರು ದೌಡಾಯಿಸಿದ್ದರು. ವಿವಿಧ ಆಯಾಮಗಳಿಂದ ಪ್ರಕರಣದ ತನಿಖೆ ನಡೆಸಿದ್ದರು. ವೃದ್ಧೆಯ ಬಳಿಯಿದ್ದ ಕಾಸು ಹೊಡೆದು ಅಲೆದಾಡುತ್ತಿದ್ದ ಅಭಿಜಿತ್ ಮಡಿವಾಳನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದರು. ಆಗ, ನಡೆದ ಸಂಗತಿಗಳೆಲ್ಲವೂ ತೆರೆದುಕೊಂಡವು.
ಎಲ್ಲರ ಜೊತೆ ಅನ್ಯೋನ್ಯವಾಗಿದ್ದ ಗೀತಾ ಅವರ ಸಾವಿನ ಬಗ್ಗೆ ಅನೇಕರು ಅನುಕಂಪ ವ್ಯಕ್ತಪಡಿಸಿದ್ದರು. ಕೊಲೆಗಾರನನ್ನು ಬಂಧಿಸುವಂತೆ ಪಟ್ಟು ಹಿಡಿದಿದ್ದರು. ಇದೀಗ ಕೊಲೆಗಾರ ಪತ್ತೆಯಾದ ಹಿನ್ನಲೆ ಪೊಲೀಸರು ಆತನೊಂದಿಗೆ ಗೀತಾ ಅವರ ಮನೆಗೆ ಬಂದು ಪಂಚನಾಮೆ ಮಾಡಿದರು. ಈ ವೇಳೆ ನೆರೆದಿದ್ದ ಜನ ಆತನಿಗೆ ಶಾಪ ಹಾಕಿ ಆಕ್ರೋಶ ಹೊರ ಹಾಕಿದರು.