ಕುಮಟಾ: ಹೊಸ ವರ್ಷ ಆಚರಣೆಗೆ ಎಲ್ಲಡೆ ಸಿದ್ಧತೆ ಜೋರಾಗಿದ್ದು, ಗೋಕರ್ಣದ `ಗ್ರೀನ್ ಲ್ಯಾಂಡ್’ ಹೋಂ ಸ್ಟೇ’ಗೆ ಖಾಸಗಿ ವೆಬ್‌ಸೈಟ್ 1.9 ಲಕ್ಷ ರೂ ಬಾಡಿಗೆ ನಿಗದಿ ಪಡಿಸಿದೆ. ಇದನ್ನು ನೋಡಿ ಆ ಹೋಂ ಸ್ಟೇ ಮಾಲಕರೇ ಕಂಗಾಲಾಗಿದ್ದಾರೆ!
ವೃತ್ತಿಯಲ್ಲಿ ರಿಕ್ಷಾ ಚಾಲಕರಾಗಿರುವ ಸಚಿನ್ ಅವರು ಗೋಕರ್ಣದ ಮೇಲಿನಕೇರಿ ಭದ್ರಕಾಳಿ ದೇವಾಲಯದ ಬಳಿ `ಗ್ರೀನ್ ಲ್ಯಾಂಡ್’ ಎಂಬ ಹೋಂ ಸ್ಟೇ ನಡೆಸುತ್ತಾರೆ. ಶೌಚಾಲಯವನ್ನು ಒಳಗೊಂಡ 6 ಕೊಠಡಿಯನ್ನು ಹೊಂದಿರುವ ಅವರು ಸಹ ಅಲ್ಲಿಯೇ ಮನೆ ಮಾಡಿಕೊಂಡಿದ್ದಾರೆ. ಏರ್ ಕಂಡಿಶನರ್ ಹೊಂದಿರುವ ಕೊಠಡಿಗಳಿಗೆ ಅವರಲ್ಲಿ ಗರಿಷ್ಟ 3 ಸಾವಿರ ರೂ ಬೆಲೆಯಿದ್ದು, ಪ್ರವಾಸೋದ್ಯಮ ಚಟುವಟಿಕೆ ಕುಂಠಿತವಾದಾಗ 2 ಸಾವಿರ ರೂ ಬೆಲೆಯಲ್ಲಿ ಕೊಠಡಿ ಪಡೆಯುವವರು ಇದ್ದಾರೆ. ಹೀಗಿದ್ದಾಗ ಹೊಸ ವರ್ಷದ ಆಚರಣೆ ವೇಳೆ `ಗ್ರೀನ್ ಲ್ಯಾಂಡ್’ ಕೊಠಡಿಗೆ ಅಗೋಡಾ ಎಂಬ ವೆಬ್‌ಸೈಟ್ 109689ರೂ ದರ ನಿಗದಿ ಮಾಡಿದೆ!
ಅಗೋಡಾ ವೆಬ್‌ಸೈಟ್ ಪ್ರವಾಸಿಗರ ಅಗತ್ಯಕ್ಕೆ ಅನುಗುಣವಾಗಿ ಹೊಟೇಲ್, ಹೋಂ ಸ್ಟೇ ರೂಂ ಒದಗಿಸುತ್ತದೆ. 284 ರೂಪಾಯಿಯಿಂದ ಹಿಡಿದು ಲಕ್ಷ ರೂ ಲೆಕ್ಕಾಚಾರದವರೆಗಿನ ಕೊಠಡಿಗಳನ್ನು ಅಗೋಡಾ ಪರಿಚಯಿಸುತ್ತದೆ. ಹೊಸ ವರ್ಷಾಚರಣೆಗೆ ಆಗಮಿಸುವವರಿಗೆ ಐಷಾರಾಮಿ ರೆಸಾರ್ಟ ತೋರಿಸಿ ಅವುಗಳಿಗೆ 2500ರೂ ದರ ನಮೂದಿಸಿದ ಅಗೋಡಾ ಸಾದಾ-ಸೀದಾ ಹೋಂ ಸ್ಟೇ ಹೊಂದಿರುವ ಸಚಿನ್ ಅವರ `ಗ್ರೀನ್ ಲ್ಯಾಂಡ್’ಗೆ ಲಕ್ಷ ರೂ ಬಾಡಿಗೆ ನಮೂದಿಸಿದೆ.
ಕೊಠಡಿ ಬಾಡಿಗೆ ಪಡೆದವರಿಗೆ ಅನಿವಾರ್ಯವಿದ್ದರೆ ಸಚಿನ್ ಅವರ ಕುಟುಂಬದವರು ಅಡುಗೆ ತಯಾರಿಸಿಕೊಡುತ್ತಾರೆ. ಬಂದ ಅತಿಥಿಗಳನ್ನು ಆತ್ಮೀಯವಾಗಿ ಸ್ವಾಗತಿಸಿ ಅವರ ಸೇವೆ ಮಾಡುತ್ತಾರೆ. ಅಷ್ಟಾದರೂ ಅವರು ಈವರೆಗೆ 3 ಸಾವಿರಕ್ಕೂ ಅಧಿಕ ಹಣ ಪಡೆದಿಲ್ಲ. ಪ್ರಸ್ತುತ ಅವರ ಬಳಿ ಆರು ಕೊಠಡಿಗಳಿದ್ದರೂ ಅವೆಲ್ಲವೂ ಭರ್ತಿಯಾಗಿಲ್ಲ.
ವೆಬ್‌ಸೈಟಿನವರ ಕಣ್ತಪ್ಪಿನಿಂದ ಈ ದುಬಾರಿ ದರ ನಿಗದಿಯಾಗಿರಬಹುದು ಎಂದು ಅಂದಾಜಿಸಲಾಗಿದ್ದು, ನಿನ್ನೆ ರಾತ್ರಿಯವರೆಗೂ ಇದ್ದ ಲಕ್ಷ ರೂಪಾಯಿಯ ಬಾಡಿಗೆ ದರ ಈಗಿಲ್ಲ!