ಹೊನ್ನಾವರ: ಸ್ಪರ್ಧಾತ್ಮಕ ಪರೀಕ್ಷೆಯ ತಯಾರಿ, ವೃದ್ಧ ತಾಯಿಯ ಆರೈಕೆ, ಮಗು ಆಗಮನದ ಸಂತಸದಲ್ಲಿದ್ದ ಮೂವರು ಶರಾವತಿ ಸೇತುವೆ ಮೇಲೆ ಹೆಣವಾಗಿದ್ದಾರೆ. ಕೆಎಸ್‌ಆರ್‌ಟಿಸಿ ಬಸ್ಸಿನ ರೂಪದಲ್ಲಿ ಬಂದ ಜವರಾಯ ಆ ಮೂವರ ನೂರಾರು ಕನಸುಗಳನ್ನು ನುಚ್ಚು ನೂರು ಮಾಡಿದ್ದು, ಕುಟುಂಬದವರ ಆಕಂದ್ರನಕ್ಕೆ ಅಲ್ಲಿದ್ದವರೆಲ್ಲರೂ ಕಣ್ಣೀರಾದರು.
ಮಾವಿನಕುರ್ವಾದ ರಾಘವೇಂದ್ರ ಸೋಮಯ್ಯ ಗೌಡ (34) ಅತ್ಯಂತ ಸಾಹಸಿಗರಾಗಿದ್ದರು. ಕೂಲಿ ಮಾಡಿ ಕಾಪಾಡಿಕೊಂಡಿದ್ದ ಕಾಸಿನ ಜೊತೆ ಸ್ವಲ್ಪ ಸಾಲ ಮಾಡಿ ಬುಲೆರೋ ಖರೀದಿಸಿದ್ದರು. ಅದರ ಬಾಡಿಗೆಯಲ್ಲಿ ಬದುಕು ಕಟ್ಟಿಕೊಳ್ಳುವ ಕನಸು ಕಂಡಿದ್ದರು. ಆರು ತಿಂಗಳ ಹಿಂದೆ ಮದುವೆಯಾಗಿದ್ದ ರಾಘವೇಂದ್ರ ಗೌಡ ಅವರು ತಾಯಿಯಾಗಲಿರುವ ಪತ್ನಿ ಹಾಗೂ ವೃದ್ಧ ತಾಯಿಯನ್ನು ಬಿಟ್ಟು ಈ ಲೋಕ ತೊರೆದಿದ್ದಾರೆ.
ಇನ್ನೂ 22 ವರ್ಷದ ನಾಥಗೇರಿಯ ರಮೇಶ ನಾಯ್ಕ ಈಚೆಗೆ ಪದವಿ ಪೂರೈಸಿದ್ದರು. ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದರು. ವಿವಿಧ ಪರೀಕ್ಷೆಯನ್ನು ಸಮರ್ಥವಾಗಿ ಎದುರಿಸಿ ಫಲಿತಾಂಶಕ್ಕಾಗಿ ಕಾದಿದ್ದರು. ವರ್ಷದ ಹಿಂದೆ ಪೆಟ್ಟು ಮಾಡಿಕೊಂಡ ತಂದೆಯ ಆರೈಕೆಯಲ್ಲಿ ತೊಡಗಿದ್ದ ರಮೇಶ ನಾಯ್ಕ ಖಾಸಗಿ ಕೆಲಸ ಸಿಕ್ಕರೂ ಹೋಗಿರಲಿಲ್ಲ. ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಸಿಕ್ಕಿ ಉನ್ನತ ಹುದ್ದೆಗೆ ಹೋಗುವ ಕನಸು ಕಂಡಿದ್ದ ರಮೇಶ ನಾಯ್ಕ ಇನ್ನಿಲ್ಲ.
ಸಂಶಿ-ಕುದ್ರಿಗಿಯ ಗೌರೀಶ ನಾಯ್ಕರ (25) ಕಥೆ ಸಹ ಇದಕ್ಕಿಂತ ಭಿನ್ನವಾಗಿಲ್ಲ. ಅವರ ಮನೆ ಪರಿಸ್ಥಿತಿಯಂತೂ ಶೋಚನೀಯ. ತಂದೆ ಸಾವಿನ ನಂತರ ತಾಯಿಗೆ ಗೌರೀಶನೇ ಆಸರೆಯಾಗಿದ್ದು, ಮಗನ ದುಡಿಮೆಯಿಂದ ಕುಟುಂಬ ನಡೆಯುತ್ತಿತ್ತು. ಎರಡು ವರ್ಷದ ಹಿಂದೆ ಮುಗ್ವಾದ ಆರೋಳ್ಳಿ ಬಳಿ ನಡೆದ ಅಪಘಾತದಲ್ಲಿ ಗೌರೀಶನ ಜೊತೆಯಿದ್ದವರು ಸಾವನಪ್ಪಿದರು. ಗೌರೀಶ ಕೂದಲೆಳೆ ಅಂತರದಲ್ಲಿ ಬದುಕಿ ಬಂದಿದ್ದು ದೊಡ್ಡ ಪವಾಡವಾಗಿತ್ತು. ಆದರೆಮ ಬೆನ್ನು ಬಿಡದ ವಿಧಿ ಎರಡು ವರ್ಷದ ನಂತರ ಶರಾವತಿ ಸೇತುವೆ ಮೇಲೆ ಗೌರೀಶನನ್ನು ಬಲಿ ಪಡೆಯಿತು. ಗೌರೀಶನ ತಾಯಿಯ ಗೋಳು ನೆನೆದವರ ಕಣ್ಣನ್ನು ತೇವ ಮಾಡಿತು.
ಮಗನ ಸಾವಿನ ಬಗ್ಗೆ ಅರಿಯದ ತಾಯಿ ಏನಾಗಿದೆ? ಎಂದು ಕೇಳುತ್ತಿರುವ ವಿಡಿಯೋ ವೈರಲ್ ಆಗಿದ್ದು, ಅದನ್ನು ಇಲ್ಲಿ ನೋಡಿ..