ಕಾರವಾರ: ರಂಗೋಲಿ ಆಕರ್ಷಣೆಯಿಂದ ಪ್ರಸಿದ್ಧಿ ಪಡೆದ ಮಾರುತಿ ದೇವರ ಜಾತ್ರೆಯಲ್ಲಿ ಈ ಬಾರಿ ಪ್ರಸಾದದ ಬಟ್ಟಲು 3.5 ಲಕ್ಷ ರೂಪಾಯಿಗೆ ಹರಾಜಾಗಿದೆ. ದೇಶದ ನಾನಾ ಭಾಗದಿಂದ ಬಂದ ಭಕ್ತರು ಪ್ರಸಾದಕ್ಕಾಗಿ ಪೈಪೋಟಿ ನಡೆಸಿದ್ದು, ದುಬೈದಲ್ಲಿ ಉದ್ಯೋಗದಲ್ಲಿರುವ ಅನುಮೋಲ್ ಬಾಂದೇಕರ್ 3.5 ಲಕ್ಷ ರೂ ಕೂಗಿ ಪ್ರಸಾದದ ಬಟ್ಟಲನ್ನು ತಮ್ಮದಾಗಿಸಿಕೊಂಡರು.
ಶನಿವಾರ ಸಂಜೆಯಿoದ ಮಾರುತಿ ದೇವರ ಜಾತ್ರೆ ಶುರುವಾಗಿದ್ದು, ಭಾನುವಾರ ಮುಕ್ತಾಯವಾಯಿತು. ಬಗೆ ಬಗೆಯ ರಂಗೋಲಿ ಪ್ರದರ್ಶನ, ಪಲ್ಲಕ್ಕಿ ಉತ್ಸವ ಗಮನ ಸೆಳೆಯಿತು. ದೇಶ-ವಿದೇಶಗಳಿಂದ ಬಂದ ಭಕ್ತರು ಜಾತ್ರೆಯಲ್ಲಿ ಉತ್ಸಾಹದಿಂದ ಭಾಗಿಯಾದರು. ಭಾನುವಾರ ದಹಿಂಕಾಲ ಉತ್ಸವ ಕುಡಕೆ ಒಡೆಯುವ ಪದ್ಧತಿ ನಡೆದ ನಂತರ ಹರಕೆ ಸ್ವರೂಪದಲ್ಲಿ ಬಂದ ವಸ್ತುಗಳ ಹರಾಜು ನಡೆಯಿತು. ಕೊನೆಗೆ ದೇವರ ಪ್ರಸಾದದ ಬಟ್ಟಲು ಹರಾಜಿಗೆ ಪೈಪೋಟಿ ನಡೆಯಿತು.
ಗೋವಾದಲ್ಲಿ ವಾಸವಾಗಿದ್ದು, ಸದ್ಯ ದುಬೈನಲ್ಲಿ ಉದ್ಯೋಗದಲ್ಲಿರುವ ಅನಮೋಲ್ ಬಾಂದೇಕರ್ ಅವರು ಪ್ರಸಾದದ ಬಟ್ಟಲಿಗೆ ಗರಿಷ್ಟ ಮೊತ್ತ ಕೂಗಿದರು. ಅನಮೋಲ್ ಅವರ ತಾಯಿ ಕಾರವಾರದ ಮಾರುತಿ ಗಲ್ಲಿಯವರಾಗಿದ್ದು, ಅದೇ ಅಭಿಮಾನದಿಂದ ಅವರು ಪ್ರಸಾದ ಸ್ವೀಕರಿಸಿದರು. ಮಾರುತಿ ದೇವಸ್ಥಾನದ ಇತಿಹಾಸದಲ್ಲಿ ಅತಿ ಹೆಚ್ಚು ಬೆಲೆಗೆ ಪ್ರಸಾದದ ತಾಟು ಹರಾಜಾಗಿದೆ.



