ಶಿರಸಿ: ಉತ್ತರ ಕನ್ನಡ ಜಿಲ್ಲೆಯ ವಿವಿಧ ಭಾಗಗಳಲ್ಲಿ ಚಳಿಯ ವಾತಾವರಣ ಕಂಡು ಬಂದಿದ್ದು, ಶನಿವಾರ ಇಲ್ಲಿನ ತಾಪಮಾನ 15 ಡಿಗ್ರಿ ಸೆಲ್ಸಿಯಸ್ ಕಾಣಿಸಿದೆ. ಬಹುತೇಕರು ಶೀತ-ನೆಗಡಿಯಿಂದ ತತ್ತರಿಸಿದ್ದು ಆಸ್ಪತ್ರೆಯ ಮೊರೆ ಹೋಗಿದ್ದಾರೆ.
ಮಲೆನಾಡು ಭಾಗದಲ್ಲಿ ಇದೀಗ ಅಡಿಕೆ ಕೆಲಸ ಜೋರಾಗಿದೆ. ಆದರೆ, ಕೊರೆಯುವ ಚಳಿ ಕಾರಣ ಕೆಲಸ ಜೋರಾಗಿ ಸಾಗುತ್ತಿಲ್ಲ. ಅಡಿಕೆ ಸಲಿಯುವವರಿಗೂ ಚಳಿ ಸಮಸ್ಯೆ ತಂದೊಡ್ಡಿದೆ. ಚಳಿಗಾಲದ ಅವಧಿಯಲ್ಲಿ ಸಣ್ಣ-ಪುಟ್ಟ ಗಾಯವಾದರೂ ಅದು ಬಹುಬೇಗ ಒಣಗದೇ ಕಾಡಿಸುತ್ತಿದ್ದು, ತಾಪಮಾನ 15 ಡಿಗ್ರಿ ಸೆಲ್ಸಿಯಸ್’ಗೆ ಇಳಿಕೆಯಾಗಿದ್ದರಿಂದ ಜನ ತತ್ತರಿಸಿದ್ದಾರೆ.
ಸರಿ ಸುಮಾರು ಬೆಳಗ್ಗೆ 8.30ರವರೆಗೂ ಚಳಿ ವಾತಾವರಣ ಕಾಣಿಸುತ್ತಿದೆ. ಸಂಜೆ 7 ಗಂಟೆ ನಂತರವೂ ಚಳಿ ಹೆಚ್ಚಾಗುತ್ತಿದೆ. ಚಳಿ ವ್ಯಾಪಕವಾಗಿದ್ದರಿಂದ ಅನೇಕರ ಕೈ-ಕಾಲು ಆಡುತ್ತಿಲ್ಲ. ಹೀಗಾಗಿ ಅನೇಕರು ಬೆಂಕಿ ಮುಂದೆ ಕೂತಿ ಚಳಿ ಕಾಯಿಸುವುದು ಸಾಮಾನ್ಯವಾಗಿ ಕಂಡು ಬರುತ್ತಿದೆ.
ಶಿರಸಿಯ ವೈದ್ಯ ಡಾ.ರವಿಕಿರಣ ಪಟವರ್ಧನ ಅವರು ನಿತ್ಯವೂ ತಾಪಮಾನ ದಾಖಲಿಸುತ್ತಿದ್ದು, ಮೊಬೈಲ್’ಗಿಂತಲು ಖಚಿತವಾಗಿ ಇಲ್ಲಿ ನಮೂದಾಗುತ್ತಿದೆ. ಅವರ ದಾಖಲೆಗಳ ಪ್ರಕಾರ ಬೇಸಿಗೆಯಲ್ಲಿ ಗರಿಷ್ಟ 38ರ ತಾಪಮಾನ ಕಾಣಿಸಿದ್ದು ಇದೆ. ಇದೀಗ 15ಕ್ಕೆ ಕುಸಿದಿರುವ ತಾಪಮಾನ ಇನ್ನೆರಡು ದಿನದಲ್ಲಿ ಇನ್ನಷ್ಟು ಕುಸಿಯುವ ಸಾಧ್ಯತೆಯಿರುವುದಾಗಿ ಅವರು ಹೇಳಿದ್ದಾರೆ.