ಕುಮಟಾ: ಬಿಜೆಪಿಯಿಂದ ಬಿ ಪಾರಂ ಪಡೆದು ಶಾಸಕರಾಗಿರುವ ದಿನಕರ ಶೆಟ್ಟಿ ಹಾಗೂ ಅದೇ ಪಕ್ಷದ ಬೆಂಬಲ ಪಡೆದು ಗ್ರಾ ಪಂ ಅಧ್ಯಕ್ಷರಾಗಿರುವ ಮಂಜುನಾಥ ಪಟಗಾರ್ ಈ ದಿನ ಎದುರಾಳಿಗಳಾಗಿದ್ದರು. ಹೆಗಡೆಯಲ್ಲಿ ನಡೆದ ಚೆಸ್ ಆಟದಲ್ಲಿ ಪೈಪೋಟಿಗೆ ಬಿದ್ದು ಅವರು ಸ್ಪರ್ಧೆ ಎದುರಿಸಿದರು.
ಹೆಗಡೆಯಲ್ಲಿ ನಡೆದ ಚದುರಂಗದ ಆಟದಲ್ಲಿ ಶಾಸಕ ದಿನಕರ ಶೆಟ್ಟಿ ಅವರಿಗೆ ಗ್ರಾ ಪಂ ಅಧ್ಯಕ್ಷ ಮಂಜುನಾಥ ಪಟಗಾರ ಎದುರಾಳಿಯಾಗಿದ್ದರು. ಶಾಸಕ ದಿನಕರ ಶೆಟ್ಟಿ ಸಹ ಬಾಲ್ಯದ ದಿನಗಳನ್ನು ನೆನಪಿಸಿಕೊಂಡು ಒಂದೊAದಾಗಿ ಕಾಯಿ ಚಲಿಸಿದರು. `ಮೊದಲು ಉತ್ತಮವಾಗಿ ಚೆಸ್ ಆಡುತ್ತಿದ್ದೆ. ಈಗೀಗ ಆಟ ಮರೆತು ಹೋಗಿದೆ’ ಎನ್ನುತ್ತಲೇ ಅವರು ಉತ್ತಮವಾಗಿ ಆಟ ಮುನ್ನಡೆಸಿದರು. ಚಾಣಾಕ್ಷತನದಿಂದ ಚದುರಂಗದ ಆಟವಾಡಿದ ದಿನಕರ ಶೆಟ್ಟಿ ಮಂಜುನಾಥ ಪಟಗಾರ ಅವರ ಕಡೆಯಿದ್ದ ರಾಣಿಯನ್ನು ಹೊಡೆದುರುಳಿಸಿದರು.
ಈ ವೇಳೆ ಸಭಾ ಕಾರ್ಯಕ್ರಮಕ್ಕೂ ತಡವಾಗುವುದನ್ನು ಅರಿತ ಮಂಜುನಾಥ ಪಟಗಾರ ಅವರು `ಶಾಸಕರ ಮುತ್ಸದ್ಧಿತನಕ್ಕೆ ಬೆಲೆ ಕೊಟ್ಟು ಆಟ ಮುಗಿಸುವೆ’ ಎಂದು ಘೋಷಿಸಿದರು. ಹೀಗಾಗಿ ಈ ಆಟದಲ್ಲಿ ಸಹ ಶಾಸಕ ದಿನಕರ ಶೆಟ್ಟಿ ಗೆಲ್ಲಲಿಲ್ಲ. ಗ್ರಾ ಪಂ ಅಧ್ಯಕ್ಷ ಮಂಜುನಾಥ ಪಟಗಾರ ಸೋಲಲಿಲ್ಲ. ಹೀಗಾಗಿ ಸಭಾ ಕಾರ್ಯಕ್ರಮದಲ್ಲಿ ಮಂಜುನಾಥ ಪಟಗಾರ ಅವರು ಶಾಸಕ ದಿನಕರ ಶೆಟ್ಟಿ ಅವರನ್ನು ಸನ್ಮಾನಿಸಿದರು.

ಈ ವೇಳೆ ಹೆಗಡೆಯಲ್ಲಿ ನೂತನವಾಗಿ ನಿರ್ಮಿಸಿರುವ ಓಪನ್ ಚೆಸ್ ಪಾರ್ಕ್’ನ್ನು ಶಾಸಕ ದಿನಕರ ಶೆಟ್ಟಿ ಉದ್ಘಾಟಿಸಿ ಚದುರಂಗದ ಆಟದಲ್ಲಿ ರಾಷ್ಟ್ರಮಟ್ಟದ ಸಾಧನೆ ಮಾಡಿದ ಸಿಂಚನ ಗಜಾನನ ಭಟ್ಟ ಮತ್ತು ಭೂಮಿಕಾ ನಾಗರಾಜ ಹೆಗಡೆ ಅವರನ್ನು ಸನ್ಮಾನಿಸಿದರು. ಕುಮಟಾ ಅರ್ಬನ್ ಬ್ಯಾಂಕ್ ಅಧ್ಯಕ್ಷ ಧೀರೂ ಶಾನಭಾಗ, ಗ್ರಾ ಪಂ ಅಭಿವೃದ್ಧಿ ಅಧಿಕಾರಿ ವಿ ಎ ಪಟಗಾರ, ತಹಶೀಲ್ದಾರ್ ಸತೀಶ ಗೌಡ, ತಾ ಪಂ ಇ ಓ ರಾಜೇಂದ್ರ ಭಟ್ಟ, ಜಿ ಪಂ ಇಂಜಿನಿಯರಿ0ಗ್ ವಿಭಾಗದ ಅಧಿಕಾರಿ ರಾಘವೇಂದ್ರ, ಮುರಾರ್ಜಿ ವಸತಿ ಶಾಲೆ ಯ ಪ್ರಾಂಶುಪಾಲ ರಾಜು ಗಾಂವಕರ್, ಜಿ ಪಂ ನಿವೃತ್ತ ಯೋಜನಾಧಿಕಾರಿ ವಿನೋದ ಅಣ್ವೇಕರ್, ಉಪಾಧ್ಯಕ್ಷೆ ಆಶಾ ನಾಯ್ಕ, ಸದಸ್ಯ ಬಿ ಜಿ ಶಾನಭಾಗ ಈ ಚದರುಂಗದ ಆಟಕ್ಕೆ ಸಾಕ್ಷಿಯಾದರು. ರವೀಂದ್ರ ಭಟ್ಟ ಸೂರಿ, ಗ್ರಾ.ಪಂ ಕಾರ್ಯದರ್ಶಿ ಕೇಶವ ನಾಯ್ಕ, ಕಂದಾಯ ನಿರೀಕ್ಷಕ ಅಣ್ಣಯ್ಯ ಇತರರು ಇದ್ದರು.



