ಶಿರಸಿ: ಹೈಟೆಕ್ ಆಸ್ಪತ್ರೆ ವಿಚಾರವಾಗಿ ಹೋರಾಟ ನಡೆಸುತ್ತಿರುವ ಅನಂತಮೂರ್ತಿ ಹೆಗಡೆ ಅವರಿಗೆ ಘಟಾನುಘಟಿಗಳ ಬೆಂಬಲ ಸಿಕ್ಕಿದೆ. ಉಪವಾಸನಿರತ ಹೋರಾಟಗಾರರಿಗೆ ಬೆಂಬಲ ವ್ಯಕ್ತಪಡಿಸಿದ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ `ಆಸ್ಪತ್ರೆ ವಿಷಯವಾಗಿ ನಡೆಯುವ ಎಲ್ಲಾ ಹೋರಾಟದಲ್ಲಿಯೂ ನಾನು ಭಾಗಿಯಾಗುವೆ’ ಎಂದು ಘೋಷಿಸಿದರು. `ಸಮಾಜಕ್ಕೆ ಒಳಿತು ಮಾಡುವ ಎಲ್ಲಾ ಹೋರಾಟಗಳಿಗೆ ಬಿಜೆಪಿ ಬೆನ್ನೆಲುಬಾಗಿರುತ್ತದೆ’ ಎಂದು ಅವರು ಪುನರುಚ್ಚರಿಸಿದರು.
ಸೋಮವಾರ ಬೆಳಗ್ಗೆ 9 ಗಂಟೆಯಿoದ ಮಧ್ಯಾಹ್ನ 3ಗಂಟೆಯವರೆಗೆ ಅನಂತಮೂರ್ತಿ ಹೆಗಡೆ ತಹಶೀಲ್ದಾರ್ ಕಚೇರಿ ಎದುರು ಉಪವಾಸ ಕೂತಿದ್ದರು. `ಶಿರಸಿಯಲ್ಲಿ ಹೈಟೆಕ್ ಆಸ್ಪತ್ರೆ ಪೂರ್ಣವಾಗುವವರೆಗೂ ಹೋರಾಟ ನಿರಂತರ’ ಎಂದು ಅನಂತಮೂರ್ತಿ ಹೆಗಡೆ ಘೋಷಿಸಿದರು. ಶಾಸಕರು ಊರಿನಲ್ಲಿಲ್ಲದ ಬಗ್ಗೆ ಅಧಿಕಾರಿಗಳು ಪ್ರತಿಭಟನಾಕಾರರಿಗೆ ತಿಳಿಸಿದ್ದು, ಅವರು ಬಂದ ನಂತರ ಮತ್ತೆ ಹೋರಾಟ ಮುಂದುವರೆಸುವ ಬಗ್ಗೆ ಧರಣಿ ನಿರತರು ನಿರ್ಧರಿಸಿದರು.
ನಾನು ಮಾಡಿದ್ದು… ನಾನೇ ಮಾಡಿದ್ದು!
`ನಾನು ಸಭಾಧ್ಯಕ್ಷನಾಗಿದ್ದಾಗ ಇಲ್ಲಿ 250 ಹಾಸಿಗೆ ಹೈಟೆಕ್ ಆಸ್ಪತ್ರೆ ಮಂಜೂರಿ ಮಾಡಿಸಿದ್ದೆ. ಅಗತ್ಯವಿರುವ 185 ಕೋಟಿ ರೂ ಅನುದಾನ ಮಂಜೂರಿ ಮಾಡಿಸಿದ್ದು, ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಭೂಮಿ ಪೂಜೆ ಮಾಡಿದ್ದರು. ಆ ವೇಳೆ ವೇಗವಾಗಿ ನಡೆಯುತ್ತಿದ್ದ ಕೆಲಸ ಇದೀಗ ಕಾಂಗ್ರೆಸ್ ಸರ್ಕಾರದ ಕೆಟ್ಟ ಆರ್ಥಿಕ ಪರಿಸ್ಥಿತಿಯಿಂದ ನಿಧಾನವಾಗಿದೆ’ ಎಂದು ವಿಶ್ವೇಶ್ವರ ಹೆಗಡೆ ಕಾಗೇರಿ ದೂರಿದರು.
`ಅನೇಕ ಅಭಿವೃದ್ಧಿ ಕೆಲಸ ನಡೆಯುತ್ತಿಲ್ಲ. ಆಸ್ಪತ್ರೆ ವಿಷಯದಲ್ಲಿಯೂ ದೊಡ್ಡ ಅನ್ಯಾಯವಾಗಿದೆ. ನಮ್ಮ ಜಿಲ್ಲೆಯ ಕರಾವಳಿ ಭಾಗದಲ್ಲಿ ಸುಸಜ್ಜಿತ ಆಸ್ಪತ್ರೆ ಆಗಬೇಕಿದ್ದು, ಅದಕ್ಕಾಗಿಯೂ ನಾವೆಲ್ಲರೂ ಪ್ರಯತ್ನಿಸೋಣ’ ಎಂದು ಕಾಗೇರಿ ಹೇಳಿದರು. ಬಿಜೆಪಿ ಪ್ರಮುಖರಾದ ರೂಪಾಲಿ ನಾಯ್ಕ, ಹರಿಪ್ರಕಾಶ ಕೋಣೆಮನೆ, ಎನ್ ಎಸ್ ಹೆಗಡೆ ಕರ್ಕಿ, ಶಿವಾನಂದ ನಾಯ್ಕ, ವಿವೇಕಾನಂದ ವೈದ್ಯ, ಎಸ್ ಎಲ್ ಘೋಟ್ನೇಕರ್, ಪ್ರಸಾದ ಹೆಗಡೆ, ಆನಂದ ಸಾಲೇರ್, ತಿಮ್ಮಪ್ಪ ಮಡಿವಾಳ, ಜಿ ಐ.ಹೆಗಡೆ, ಗೋಪಾಲಕೃಷ್ಣ ವೈದ್ಯ ಇತರರು ಪ್ರತಿಭಟನೆಗೆ ಬೆಂಬಲ ನೀಡಿದರು.
ವಿದೇಶಕ್ಕೆ ಹಾರಿದ ಶಾಸಕ
ನಟ ಶಿವರಾಜಕುಮಾರ್ ಅವರ ಅನಾರೋಗ್ಯದ ಹಿನ್ನಲೆ ಅವರು ವಿದೇಶದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಶಿವರಾಜಕುಮಾರ ಅವರ ಸಂಬAಧಿಯಾದ ಭೀಮಣ್ಣ ನಾಯ್ಕ ಅವರು ಮೂರು ದಿನದ ಹಿಂದೆ ವಿದೇಶಕ್ಕೆ ಹೋಗಿದ್ದಾರೆ. ಅದಾಗಿಯೂ `ಹೈಟೆಕ್ ವಿಚಾರದಲ್ಲಿ ಕ್ಷೇತ್ರದ ಶಾಸಕರು ಸತ್ಯ ಹೇಳಬೇಕು. ಮೌನವಾಗಿರುವುದು ಶೋಭೆಯಲ್ಲ’ ಎಂದು ಅನಂತಮೂರ್ತಿ ಹೆಗಡೆ ಹೇಳಿದರು. `ಶಾಸಕರು ಕ್ಷೇತ್ರದಲ್ಲಿರದ ಕಾರಣ ಸಾಂಕೇತಿಕ ಪ್ರತಿಭಟನೆ ನಡೆಸಿದ್ದು, ಮುಂದೆ ಇನ್ನಷ್ಟು ದೊಡ್ಡ ಪ್ರಮಾಣದಲ್ಲಿ ಧರಣಿ ನಡೆಸಲಾಗುತ್ತದೆ’ ಎಂದು ಎಚ್ಚರಿಸಿದರು.