ಜಾತ್ರೆಗೆ ಬಂದ ಮಹಿಳೆಯನ್ನು ಹಿಂಬಾಲಿಸಿದವನನ್ನು ಪ್ರಶ್ನಿಸಿದ ಕಾರಣ ಮುಂಡಗೋಡು ಸಾಲಗಾಂವ್ ಜಾತ್ರೆಯಲ್ಲಿ ಎರಡು ಗುಂಪುಗಳ ನಡುವೆ ಹೊಡೆದಾಟ ನಡೆದಿದೆ.
ಜನವರಿ 15ರ ರಾತ್ರಿ ಸಾಲಗಾಂವ್ ಜಾತ್ರೆ ನಡೆಯುತ್ತಿತ್ತು. ಆಂದಲಗಿಯ ಶರಣ ಕಣ್ಣೂರು ಅವರು ಕುಟುಂಬಸಹಿತವಾಗಿ ಜಾತ್ರೆಗೆ ಹೋಗಿದ್ದರು. ಶರಣ ಕಣ್ಣೂರು ಅವರ ಪತ್ನಿಯನ್ನು ಮೂವರು ಪದೇ ಪದೇ ಚುಡಾಯಿಸುತ್ತಿದ್ದರು.
ಈ ವೇಳೆ ಅವರ ಹಿಂದೆ ಬರುತ್ತಿದ್ದ ಓಣಿ ಮುಂಡಗೋಡಿನ ವಿನಾಯಕ ಬೋವಿ ಅವರನ್ನು ಶರಣ ಕಣ್ಣೂರು ಪ್ರಶ್ನೆ ಮಾಡಿದರು. `ಯಾಕೆ ನಮ್ಮನ್ನು ಹಿಂಬಾಲಿಸುತ್ತೀರಿ? ಯಾಕೆ ಹೀಗೆ ಪೀಡಿಸುತ್ತೀರಿ?’ ಎಂದವರು ಪ್ರಶ್ನಿಸಿದ್ದರು. ಇದರಿಂದ ಸಿಟ್ಟಾದ ವಿನಾಯಕ ಬೋವಿ `ಇದು ನಿಮ್ಮ ಅಪ್ಪನ ಜಾತ್ರೆಯಾ?’ ಎಂದು ಮರುಪ್ರಶ್ನೆ ಹಾಕಿದ್ದರು.
ಇದೇ ವಿಷಯವಾಗಿ ಅವರಿಬ್ಬರ ನಡುವೆ ಗಲಾಟೆ ನಡೆದಿದ್ದು, ವಿನಾಯಕ ಬೋವಿ ಜೊತೆಗಿದ್ದ ಇಬ್ಬರು ಸೇರಿ ಶರಣ ಕಣ್ಣೂರು ಅವರ ಮೇಲೆ ಕೈ ಮಾಡಿದ್ದರು. ಶರಣ ಅವರ ಕತ್ತು ಹಿಚುಕಿ ದೂಡಿದ್ದರು. ಇದನ್ನು ನೋಡಿದ ಶರಣ ಕಣ್ಣೂರ ಅವರ ತಮ್ಮ ನಾಗರಾಜ ಹೊಡೆದಾಟ ತಪ್ಪಿಸಲು ಮುಂದಾದರು.
ಆಗ ವಿನಾಯಕ ಬೋವಿ ಬಾಯ್ತೆರೆದು ನಾಗರಾಜ ಅವರ ಕಿವಿ ಕಚ್ಚಿದರು. ಕಿವಿಯಿಂದ ರಕ್ತ ಬಂದ ಪರಿಣಾಮ ನಾಗರಾಜ ಅವರು ಅಲ್ಲಿಯೇ ಬಿದ್ದಿದ್ದು, ವಿನಾಯಕ ಬೋವಿ ಹಾಗೂ ಅವರ ಜೊತೆಯಿದ್ದ ಇಬ್ಬರು ಅಲ್ಲಿಂದ ಪರಾರಿಯಾದರು. ಇದಾದ ಮೇಲೆ ನಾಗರಾಜ ಅವರನ್ನು ಆಸ್ಪತ್ರೆಗೆ ದಾಖಲಿಸಿ, ಶರಣ ಕಣ್ಣೂರು ಪೊಲೀಸ್ ಪ್ರಕರಣ ದಾಖಲಿಸಿದರು.