ಚಿತ್ರನಟಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮಾಜಿ ಸಚಿವೆ ಉಮಾಶ್ರೀ ಅವರು ತಮ್ಮ 67ನೇ ವಯಸ್ಸಿನಲ್ಲಿ ಯಕ್ಷಗಾನ ರಂಗ ಪ್ರವೇಶ ಮಾಡಿದ್ದು, ಶುಕ್ರವಾರ ರಾತ್ರಿ ಹೊನ್ನಾವರದಲ್ಲಿ ನಡೆದ ಈ ಆಟಕ್ಕೆ ಸಾವಿರಾರು ಜನ ಸಾಕ್ಷಿಯಾದರು.
ಶುಕ್ರವಾರ ಬೆಳಗ್ಗೆ 6.30ಕ್ಕೆ ರೈಲಿನ ಮೂಲಕ ಹೊನ್ನಾವರಕ್ಕೆ ಬಂದ ಉಮಾಶ್ರೀ ಅವರು ಹೊಟೇಲ್’ವೊಂದರಲ್ಲಿ ತಂಗಿದ್ದರು. ಅಲ್ಲಿಯೇ ತಮ್ಮ ಪಾತ್ರ ಅಭಿನಯನಕ್ಕಾಗಿ ಒಂದು ತಾಸು ತಾಲೀಮು ನಡೆಸಿದರು. ಅದಾದ ನಂತರ ಮೂರು ತಾಸುಗಳ ಕಾಲ ಶ್ರಮಿಸಿ ಸ್ವತಃ ವೇಷಭೂಷಣ ಸಿದ್ಧಪಡಿಸಿಕೊಂಡರು. ರಾತ್ರಿ 9.30ಕ್ಕೆ ಪೆರ್ಡೂರಿನ ಅನಂತಪದ್ಮನಾಭ ಯಕ್ಷಗಾನ ಮಂಡಳಿ ಆಯೋಜಿಸಿದ್ದ ಶ್ರೀರಾಮ ಪಟ್ಟಾಭಿಷೇಕ – ಮಾಯಾಮೃಗಾವತಿ ಎಂಬ ಯಕ್ಷಗಾನ ವೇದಿಕೆಯನ್ನು ಅವರು ಪ್ರವೇಶಿಸಿದರು.
ಉಮಾಶ್ರೀ ಅವರ ರಂಗ ಪ್ರವೇಶಕ್ಕೆ ಭಾರೀ ಪ್ರಮಾಣದ ಚಪ್ಪಾಳೆ ಸದ್ದು ಕೇಳಿ ಬಂದಿದ್ದು, ಅದೇ ಹುಮ್ಮಸ್ಸಿನಲ್ಲಿ ಅವರು ಮಂಥರೆಯ ಪಾತ್ರ ನಿಭಾಯಿಸಿದರು. ತಮ್ಮದೇ ಆದ ಹಾಸ್ಯ ಶೈಲಿಯಲ್ಲಿ ಮಾತನಾಡಿ ನೆರೆದಿದ್ದವರನ್ನು ನಕ್ಕು ನಲಿಸಿದರು. ಬೆಂಗಳೂರಿನಲ್ಲಿ ಸಹ ಅವರು ಎರಡು ದಿನ ಯಕ್ಷಗಾನ ತರಬೇತಿ ಪಡೆದಿದ್ದು, ಅಲ್ಲಿ ಕಲಿತಿದನ್ನು ಇಲ್ಲಿ ಅಚ್ಚುಕಟ್ಟಾಗಿ ನಿಭಾಯಿಸಿದರು.
ಶನಿವಾರ ಬೆಳಗ್ಗೆ ಅವರು ಕೊಲ್ಲೂರು ದೇವಾಲಯಕ್ಕೆ ತೆರಳಿದ್ದಾರೆ. ಅಲ್ಲಿಂದ ಮುಂದೆ ಉಮಾಶ್ರೀ ಅವರು ಬೆಂಗಳೂರಿಗೆ ಹೋಗಲಿದ್ದಾರೆ.
ಉಮಾಶ್ರೀ ಅಭಿನಯದ ಯಕ್ಷಗಾನದ ವಿಡಿಯೋ ಇಲ್ಲಿ ನೋಡಿ..