`ಆಡಳಿತ ಅನುಕೂಲಕ್ಕಾಗಿ ಉತ್ತರ ಕನ್ನಡ ಜಿಲ್ಲೆಯನ್ನು ಎರಡು ಭಾಗ ಮಾಡುವುದಾದರೆ ಮದ್ಯವರ್ತಿ ಸ್ಥಳವಾದ ಯಲ್ಲಾಪುರವನ್ನು ಜಿಲ್ಲಾ ಕೇಂದ್ರವನ್ನಾಗಿಸಿದರೆ ಎಲ್ಲಾ ತಾಲೂಕಿನವರಿಗೂ ಅನುಕೂಲ’ ಎಂದು ನಾಗರಿಕ ವೇದಿಕೆ ಅಧ್ಯಕ್ಷ ರಾಮು ನಾಯ್ಕ ಪುನರುಚ್ಚರಿಸಿದ್ದಾರೆ.
`ಮಲೆನಾಡು, ಕರಾವಳಿ, ಅರೆಬಯಲು ಸೀಮೆಗಳಿಂದ ಕೂಡಿರುವ ಉತ್ತರ ಕನ್ನಡ ಜಿಲ್ಲೆಯೂ ವಿಭಿನ್ನ ಪರಿಸರ, ವಿಭಿನ್ನ ಸಂಸ್ಕೃತಿಯನ್ನು ಒಳಗೊಂಡಿದೆ. ರಾಜಕೀಯ ಕಾರಣಕ್ಕಾಗಿ ಜಿಲ್ಲೆಯನ್ನು ಒಡೆಯುವುದು ಸಮಂಜಸವಲ್ಲ. ಅದಾಗಿಯೂ ಆಡಳಿತ ಕಾರಣದಿಂದ ಜಿಲ್ಲೆ ವಿಭಾಗ ಮಾಡುವುದಾದರೆ ಯಲ್ಲಾಪುರವನ್ನು ಜಿಲ್ಲಾಕೇಂದ್ರವನ್ನಾಗಿಸಬೇಕು. ಈ ವಿಷಯವನ್ನು ಸರ್ಕಾರದ ಗಮನಕ್ಕೂ ತರಲಾಗಿದೆ’ ಎಂದವರು ಹೇಳಿದ್ದಾರೆ.
`ಕರ್ನಾಟಕ ಏಕಿಕರಣದ ವೇಳೆ 19 ಜಿಲ್ಲೆಗಳಿದ್ದವು. ಅದೀಗ 31 ಜಿಲ್ಲೆಗಳಾಗಿವೆ. ಸರ್ಕಾರಕ್ಕೆ ಅಗತ್ಯವಿದ್ದಾಗ ಜಿಲ್ಲೆ ವಿಭಾಗಿಸುವುದು ಹೊಸದಲ್ಲ. ಆದರೆ, ಎಲ್ಲಾ ಕಡೆ ಜಿಲ್ಲೆ ವಿಭಾಗಿಸುವಾಗ ಜನರಿಗೆ ಅನುಕೂಲವಾಗುವುದನ್ನು ಗಮನಿಸಿ ಹೊಸ ಜಿಲ್ಲೆ ಘೋಷಿಸಲಾಗುತ್ತದೆ. ಘಟ್ಟದ ಮೇಲಿನ ತಾಲೂಕುಗಳನ್ನು ಸೇರಿಸಿ ಪ್ರತ್ಯೇಕ ಜಿಲ್ಲೆ ಘೋಷಣೆ ಮಾಡಿದರೆ ಆ ಎಲ್ಲಾ ತಾಲೂಕುಗಳಿಗೆ ಯಲ್ಲಾಪುರ ಮದ್ಯ ಸ್ಥಳ. ಈ ಬಗ್ಗೆ ಎಲ್ಲಾ ಹೋರಾಟಗಾರರಿಗೂ ಅರಿವಿದೆ. ಹೀಗಾಗಿ ಜಿಲ್ಲಾಕೇಂದ್ರಕ್ಕೂ ಯಲ್ಲಾಪುರವೇ ಸೂಕ್ತ’ ಎಂದವರು ಅಭಿಪ್ರಾಯಪಟ್ಟಿದ್ದಾರೆ.
`ಜಿಲ್ಲಾ ವಿಭಜನೆಯ ಬಗ್ಗೆ ಸಿದ್ದಾಪುರ, ಶಿರಸಿ, ಮುಂಡಗೋಡ, ಯಲ್ಲಾಪುರ, ಹಳಿಯಾಳ, ದಾಂಡೇಲಿ, ಜೋಯಿಡಾ ಜನರ ಅಭಿಪ್ರಾಯ ಸಂಗ್ರಹ ನಡೆಯಬೇಕು. ಅವರೆಲ್ಲರಿಗೂ ಅನುಕೂಲವಾಗುವ ಮದ್ಯವರ್ತಿ ಸ್ಥಳದ ಬಗ್ಗೆ ಅಧಿಕಾರಿಗಳು ಹಾಗೂ ಹೋರಾಟಗಾರರು ಪರಾಮರ್ಶಿಸಬೇಕು’ ಎಂದವರು ಒತ್ತಾಯಿಸಿದ್ದಾರೆ.