`ನಾವೆಲ್ಲರೂ ಒಂದು’ ಎನ್ನುತ್ತಿದ್ದ ಕಾಂಗ್ರೆಸ್ ವಲಯದಲ್ಲಿ ಇದೀಗ ಭಿನ್ನಾಭಿಪ್ರಾಯ ಕೇಳಿ ಬಂದಿದೆ. ಸೋಮವಾರ ನಡೆದ ಆಂತರಿಕ ಸಭೆಯಲ್ಲಿ ಪಕ್ಷ ಸಂಘಟನೆ ವಿಷಯವಾಗಿ ಅನೇಕರು ಅಸಮಧಾನ ವ್ಯಕ್ತಪಡಿಸಿದ್ದಾರೆ.
ಯಲ್ಲಾಪುರ ತಾಲೂಕಿನ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಡಿ ಎನ್ ಗಾಂವ್ಕರ್ ಅವರ ಮನೆಯಲ್ಲಿ ಸೋಮವಾರ ಕಾಂಗ್ರೆಸ್ ಪಕ್ಷದ ಸಭೆ ನಡೆಯಿತು. ಈ ಸಭೆಯಲ್ಲಿ ಭಾಗವಹಿಸಿದ ಅನೇಕರು ಪಕ್ಷ ಸಂಘಟನೆ ವಿಷಯದಲ್ಲಿ ತಮ್ಮನ್ನು ವಿಶ್ವಾಸಕ್ಕೆ ಪಡೆಯದ ಬಗ್ಗೆ ಅಸಮಧಾನ ವ್ಯಕ್ತಪಡಿಸಿದ್ದಾರೆ. ತಾಲೂಕು ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರೆಲ್ಲ ಸೇರಿ ಸಭೆ ನಡೆಸಿದ್ದು, `ತಾಲೂಕಿನಲ್ಲಿ ಕಾಂಗ್ರೆಸ್ ಪಕ್ಷ ಸಂಘಟನೆ ಸರಿಯಾಗಿಲ್ಲ’ ಎನ್ನುವ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಈ ಸಭೆಯಲ್ಲಿ `ನಿಷ್ಠಾವಂತ ಕಾರ್ಯಕರ್ತರಿಗೆ ಬೆಲೆಯಿಲ್ಲ. ಚುನಾವಣೆಯಲ್ಲಿ ದುಡಿದವರನ್ನು ಗಣನೆಗೆ ತೆಗೆದುಕೊಳ್ಳುತ್ತಿಲ್ಲ. ಹಿರಿಯ ಶಾಸಕ ಆರ್ ವಿ ದೇಶಪಾಂಡೆ ಅವರಿಗೂ ಕಾಂಗ್ರೆಸ್ ಪಕ್ಷ ಮನ್ನಣೆ ನೀಡಿಲ್ಲ’ ಎನ್ನುವುದರ ಬಗ್ಗೆ ಈ ಸಭೆಯಲ್ಲಿ ವ್ಯಾಪಕ ಚರ್ಚೆ ನಡೆದಿದೆ.
`ಕಳೆದ ಚುನಾವಣೆಯಲ್ಲಿ ನಿರಂತರ ಶ್ರಮದ ಫಲವಾಗಿ ಪಕ್ಷಕ್ಕೆ ಮತಗಳನ್ನು ತರುವಲ್ಲಿ ಯಶಸ್ವಿಯಾದ ಪಕ್ಷದ ನಿಷ್ಠಾವಂತ ಕಾರ್ಯಕರ್ತರಿಗೆ ಕಾಂಗ್ರೆಸ್ ಪಕ್ಷದಲ್ಲಿ ಕಿಂಚಿತ್ತು ಕಿಮ್ಮತ್ತಿಲ್ಲ. ಪಕ್ಷದ ಹಿತದೃಷ್ಟಿಯಿಂದ ನೀಡಲಾದ ಸಲಹೆಗಳನ್ನು ನಾಯಕರು ಗಣನೆಗೆ ತೆಗೆದುಕೊಳ್ಳುತ್ತಿಲ್ಲ. ನಿಷ್ಠಾವಂತ ಕಾರ್ಯಕರ್ತರ ಬೇಡಿಕೆಗಳಿಗೂ ಇಲ್ಲಿ ಬೆಲೆ ಸಿಗುತ್ತಿಲ್ಲ’ ಎಂದು ಡಿಸಿಸಿ ಕಾರ್ಯದರ್ಶಿ ಬಾಬು ಸಿದ್ದಿ ಗುಡುಗಿದರು.
`ಆರ್ ವಿ ದೇಶಪಾಂಡೆ ಅವರು ಜಿಲ್ಲೆಯ ಮುತ್ಸದ್ಧಿ ರಾಜಕಾರಣಿ. ಅವರಿಗೆ ಸಹ ಕಾಂಗ್ರೆಸ್ ಪಕ್ಷ ಸೂಕ್ತ ಸ್ಥಾನಮಾನ ನೀಡಿಲ್ಲ. ಅದರಿಂದ ಮೂಲ ಕಾಂಗ್ರೆಸ್ಸಿಗರಿಗೆ ಅನ್ಯಾಯವಾಗಿದೆ’ ಎಂದು ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಡಿ ಎನ್ ಗಾಂವ್ಕರ್ ಅಸಮಧಾನ ವ್ಯಕ್ತಪಡಿಸಿದ್ದಾರೆ. `ಪಕ್ಷಕ್ಕಾಗಿ ದುಡಿದ ನಿಷ್ಠಾವಂತರನ್ನು ನಿರ್ಲಕ್ಷಿಸಿದರೆ ಕಾಂಗ್ರೆಸ್ ಬೆಳವಣಿಗೆ ಅಧೋಗತಿಗೆ ತೆರಳುವುದು ಖಚಿತ’ ಎಂದು ಸಭೆಯಲ್ಲಿ ಹಾಜರಿದ್ದ ಅನಿಲ್ ನಾಯ್ಕ ಚಿನ್ನಾಪುರ ಅಭಿಪ್ರಾಯ ಪಟ್ಟಿದ್ದಾರೆ.
ಈ ಎಲ್ಲಾ ವಿಷಯಗಳ ಬಗ್ಗೆ ಚರ್ಚಿಸಲು ಕಾಂಗ್ರೆಸ್ ನಿಷ್ಠಾವಂತ ಕಾರ್ಯಕರ್ತರನ್ನು ಒಗ್ಗೂಡಿಸಿ ಇನ್ನೊಂದು ಸಭೆ ನಡೆಸಲು ನಿರ್ಧರಿಸಲಾಯಿತು. ಸಭೆಯಲ್ಲಿ ನಡೆದ ಚರ್ಚೆಯ ಬಗ್ಗೆ ಸ್ಥಳೀಯ ನಾಯಕರ ಗಮನಕ್ಕೆ ತರುವುದು ಹಾಗೂ ಜಿಲ್ಲಾ ನಾಯಕರಿಗೂ ಮನವರಿಕೆ ಮಾಡುವ ಬಗ್ಗೆ ಹಾಜರಿದ್ದವರು ನಿರ್ಣಯಿಸಿದರು. ಕೆ ಪಿ ಸಿ ಸಿ ಸದಸ್ಯ ದಿಲೀಪ ರೋಕಡೆ, ಪ ಪಂ ಸದಸ್ಯ ಸಯ್ಯದ್ ಕೆಸರ. ಪ್ರಮುಖರಾದ ವಿ ಜಿ ಭಾಗ್ವತ್, ಎನ್ ಎನ್ ಹೆಬ್ಬಾರ, ಬಾಬಾಜಾನ್ ಕಿರವತ್ತಿ. ಭೀಮ್ಷೀ ಕಿರವತ್ತಿ, ಯು ಕೆ ಭಟ್ಟ, ಎನ್ ವಿ ಭಟ್ಟ ಇತರರು ಈ ಸಭೆಯಲ್ಲಿದ್ದು ಅಭಿಪ್ರಾಯ ಮಂಡಿಸಿದರು.