ಸಂತೆಗೆ ತರಕಾರಿ ಒಯ್ಯುತ್ತಿದ್ದ ಲಾರಿ ಯಲ್ಲಾಪುರದ ಅರಬೈಲ್ ಪ್ರದೇಶದಲ್ಲಿ ಪಲ್ಟಿಯಾಗಿದೆ.
ಈ ಅಪಘಾತದಲ್ಲಿ ಒಟ್ಟು 9 ಜನ ಸಾವನಪ್ಪಿದ್ದಾರೆ. 16ಕ್ಕೂ ಅಧಿಕ ಜನ ಗಾಯಗೊಂಡಿದ್ದಾರೆ. ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಗಳಿವೆ.
ಬುಧವಾರ ಬೆಳಗ್ಗೆ ಹುಬ್ಬಳ್ಳಿ – ಅಂಕೋಲಾ ಹೆದ್ದಾರಿ ಮೂಲಕ ಈ ಲಾರಿ ಚಲಿಸುತ್ತಿತ್ತು. ಸವಣೂರಿನಿಂದ ಹೊರಟ ಲಾರಿಯಲ್ಲಿ 40ರಷ್ಟು ಜನರಿದ್ದರು. ಅವರೆಲ್ಲರೂ ತರಕಾರಿ ಮಾರಾಟಕ್ಕಾಗಿ ಕುಮಟಾ ಸಂತೆಗೆ ಹೋಗುತ್ತಿದ್ದರು.
ಹಣ್ಣು-ತರಕಾರಿ ಮೂಟೆಗಳ ಜೊತೆ ಕುಳಿತು ರೈತರು ಹಾಗೂ ವ್ಯಾಪಾರಿಗಳು ಲಾರಿಯಲ್ಲಿ ಸಂಚರಿಸುತ್ತಿದ್ದರು. ಕಾಗೇರಿ ಪೆಟ್ರೋಲ್ ಬಂಕ್ ಬಳಿ ಲಾರಿ ಚಾಲಕನ ನಿಯಂತ್ರಣ ತಪ್ಪಿ ಧರೆಗೆ ಗುದ್ದಿತು.
ಪರಿಣಾಮ ಲಾರಿ ಪಲ್ಟಿಯಾಗಿದ್ದು 9 ಜನ ಅಲ್ಲಿಯೇ ಸಾವನಪ್ಪಿದರು. ಅವರ ಶವವನ್ನು ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಗಿದೆ. ನಾಲ್ವರು ಮಾತ್ರ ಸುರಕ್ಷಿತವಾಗಿರುವ ಮಾಹಿತಿ ಲಭಿಸಿದೆ. ಪೊಲೀಸರು ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.