ಹಿತ್ಲಕಾರಗದ್ದೆಯ ದಾತ್ರಿ ನಗರದಲ್ಲಿ ನಿವೇಶನ ಖರೀದಿಸಿರುವ ಮಂಜುನಾಥ ಹೆಗಡೆ ಕುಡಿಯುವ ನೀರಿನ ಸೌಕರ್ಯಕ್ಕಾಗಿ ಹೋರಾಟ ನಡೆಸಿದ್ದು, ಈ ವೇಳೆ ಯಲ್ಲಾಪುರ ಪಟ್ಟಣ ಪಂಚಾಯತ ಮುಖ್ಯಾಧಿಕಾರಿ ಸುನೀಲ ಗಾವಡೆ ನೀರು ಪೂರೈಸುವ ಭರವಸೆ ನೀಡಿದ್ದರು. ಆದರೆ, ಅವರು ನುಡಿದಂತೆ ನಡೆದಿರಲಿಲ್ಲ. ಈ ಹಿನ್ನಲೆ ಮಂಜುನಾಥ ಹೆಗಡೆ ಜ 23ರಂದು ಮತ್ತೆ ಧರಣಿ ನಡೆಸುವ ಬಗ್ಗೆ ಘೋಷಿಸಿದ್ದಾರೆ. ಇದೀಗ ದಾತ್ರಿ ನಗರದ ನಿವೇಶನಕ್ಕೆ ಪಟ್ಟಣ ಪಂಚಾಯತ ವೆಚ್ಚದಲ್ಲಿ ನೀರು ಪೂರೈಸಲು ಪ ಪಂ ಸದಸ್ಯ ಸತೀಶ ನಾಯ್ಕ ವಿರೋಧ ವ್ಯಕ್ತಪಡಿಸಿದ್ದಾರೆ.
ಯಲ್ಲಾಪುರ ತಾಲೂಕಿನ ಕಾರವಾರ-ಹುಬ್ಬಳ್ಳಿ ಹೆದ್ದಾರಿಗೆ ಹೊಂದಿಕೊAಡು ದಾತ್ರಿ ನಗರ ಎಂಬ ನಾಮಫಲಕವಿದೆ. ಹಿತ್ಲಕಾರಗದ್ದೆ ವ್ಯಾಪ್ತಿಯಲ್ಲಿ ಕಳೆದ ಐದಾರು ವರ್ಷಗಳ ಹಿಂದೆ ನಿವೇಶನಗಳನ್ನು ನಿರ್ಮಿಸಲಾಗಿದೆ. ಅಗತ್ಯ ಮೂಲಭೂತ ಸೌಕರ್ಯ ನೀಡುವ ಮೊದಲೇ ಅದನ್ನು ಪಟ್ಟಣ ಪಂಚಾಯತ ತನ್ನ ಸುಪರ್ಧಿಗೆ ಪಡೆದಿದೆ. ಇಲ್ಲಿ ನಿವೇಶನ ಪಡೆದ ಬಹುತೇಕರು ತಮ್ಮ ಸ್ವಂತ ವೆಚ್ಚದಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಆದರೆ, ಆರ್ಥಿಕ ಸಂಕಷ್ಟದಲ್ಲಿರುವ ಮಂಜುನಾಥ ಹೆಗಡೆ ಅವರು ತಮ್ಮ ಹಕ್ಕಿಗಾಗಿ ಹೋರಾಟ ಮಾಡುತ್ತಿದ್ದಾರೆ. ಕನಿಷ್ಟ ಮೂಲಭೂತ ಸೌಕರ್ಯಗಳನ್ನು ಒದಗಿಸುವಂತೆ ಅವರು ಪಟ್ಟು ಹಿಡಿದಿದ್ದಾರೆ.
ಮಂಜುನಾಥ ಹೆಗಡೆ ಅವರ ಹೋರಾಟ ಮನ್ನಿಸಿ ಅಧಿಕಾರಿಗಳು ಕುಡಿಯುವ ನೀರು ಒದಗಿಸುವ ಭರವಸೆ ನೀಡಿದ್ದರೂ, ಪಟ್ಟಣ ಪಂಚಾಯತ ಅನುದಾನದಲ್ಲಿ ಕುಡಿಯುವ ನೀರು ಪೂರೈಸಲು ಪ ಪಂ ಸದಸ್ಯ ಸತೀಶ ನಾಯ್ಕ ವಿರೋಧ ವ್ಯಕ್ತಪಡಿಸಿದ್ದಾರೆ. `ಮೂಲಭೂತ ಸೌಕರ್ಯ ಒದಗಿಸಿದ ನಂತರವೇ ವಸತಿ ನಿವೇಶನಗಳನ್ನು ಪಟ್ಟಣ ಪಂಚಾಯತ ಹಸ್ತಾಂತರಿಸಿಕೊಳ್ಳಬೇಕಿತ್ತು. ತರಾತುರಿಯಲ್ಲಿ ವಸತಿ ನಿವೇಶನಗಳನ್ನು ಹಸ್ತಾಂತರಿಸಿಕೊAಡು ಖಾಸಗಿಯವರ ಅನುಕೂಲಕ್ಕೆ ತಕ್ಕಂತೆ ಇದೀಗ ಸರ್ಕಾರಿ ಹಣವನ್ನು ಮೂಲಭೂತ ಸೌಕರ್ಯ ಒದಗಿಸುವುದು ಸರಿಯಲ್ಲ’ ಎಂದು ಸತೀಶ ನಾಯ್ಕ ಹೇಳಿದ್ದಾರೆ.
`ವಸತಿ ಬಡಾವಣೆ ನಿರ್ಮಿಸುವವರು ಸರ್ಕಾರದ ನಿಯಮಗಳನ್ನು ಪಾಲಿಸುವುದು ಕಡ್ಡಾಯ. ಅದರ ಪ್ರಕಾರ ಅಲ್ಲಿನ ನಿವಾಸಿಗಳಿಗೆ ಕುಡಿಯುವ ನೀರು, ಒಳಚರಂಡಿ ವ್ಯವಸ್ಥೆ, ಉದ್ಯಾನವನ ಸೇರಿ ಹಲವು ಬಗೆಯ ಮೂಲಭೂತ ಸೌಕರ್ಯ ಒದಗಿಸಬೇಕು. ಈ ನಿಯಮಗಳನ್ನು ಮೀರಿ ವಸತಿ ನಿವೇಶನಗಳ ಮಾರಾಟ ನಡೆದಿದ್ದು, ಅದನ್ನು ಖರೀದಿಸಿದವರು ಸಮಸ್ಯೆ ಅನುಭವಿಸುತ್ತಿದ್ದಾರೆ. ಅದಾಗಿಯೂ ಬೇರೆ ಬೇರೆ ಅಭಿವೃದ್ಧಿಗೆ ಮೀಸಲಿರುವ ಸರ್ಕಾರಿ ಹಣವನ್ನು ಬಡಾವಣೆಯ ಕುಡಿಯುವ ನೀರು ಪೂರೈಕೆಗೆ ವೆಚ್ಚ ಮಾಡುವುದು ಸರಿಯಲ್ಲ’ ಎಂದು ಸತೀಶ ನಾಯ್ಕ ಹೇಳಿದ್ದಾರೆ.
`ಬಡಾವಣೆ ಹಸ್ತಾಂತರಕ್ಕೂ ಮುನ್ನ ಅಧಿಕಾರಿಗಳು ಎಲ್ಲಾ ನಿವೇಶನಗಳಿಗೂ ಮೂಲಭೂತ ಸೌಕರ್ಯ ಕಲ್ಪಿಸಲಾಗಿದೆಯೇ? ಎಂದು ಪರಿಶೀಲಿಸಬೇಕಿತ್ತು. ತರಾತುರಿಯಲ್ಲಿ ಹಸ್ತಾಂತರ ಪ್ರಕ್ರಿಯೆ ನಡೆದಿದ್ದರಿಂದ ಸಮಸ್ಯೆ ಉಲ್ಬಣವಾಗಿದ್ದು, ವಸತಿ ಬಡಾವಣೆ ನಿರ್ಮಿಸಿದವರಿಗೆ ನೋಟಿಸ್ ನೀಡಿ ನಿವೇಶನದಾರರಿಗೆ ನೀರಿನ ಸೌಕರ್ಯ ಕಲ್ಪಿಸಿಕೊಡಬೇಕು’ ಎಂದವರು ಆಗ್ರಹಿಸಿದ್ದಾರೆ.
`ತೆರಿಗೆ ಪಾವತಿಸುವ ನನಗೆ ಮೂಲಭೂತ ಸೌಕರ್ಯ ಒದಗಿಸುವುದು ಸರ್ಕಾರದ ಕರ್ತವ್ಯ. ಬಡಾವಣೆ ನಿರ್ಮಿಸಿದವರಾದರೂ ಸರಿ. ಪಟ್ಟಣ ಪಂಚಾಯತವಾದರೂ ಸರಿ. ಕುಡಿಯುವ ನೀರು ಸೇರಿ ಅಗತ್ಯ ಸೌಕರ್ಯ ಒದಗಿಸಬೇಕು. ಇಲ್ಲವಾದಲ್ಲಿ ಹೋರಾಟ ಅನಿವಾರ್ಯ’ ಎಂದು ಮಂಜುನಾಥ ಹೆಗಡೆ ಹೇಳಿದ್ದಾರೆ. `ಪಟ್ಟಣ ಪಂಚಾಯತ ಹಣದಲ್ಲಿ ಖಾಸಗಿ ನಿವೇಶನದಾರರಿಗೆ ನೀರು ಪೂರೈಸಿದರೆ ಅದರ ವಿರುದ್ಧ ತಾನೂ ಪ್ರತಿಭಟಿಸುವೆ’ ಎಂದು ಸತೀಶ ನಾಯ್ಕ ಎಚ್ಚರಿಸಿದ್ದಾರೆ.