ಸವಣೂರಿನಿಂದ ಕುಮಟಾಗೆ ಸಂತೆ ವ್ಯಾಪಾರಕ್ಕೆ ತೆರಳುತ್ತಿದ್ದ ಲಾರಿಯಲ್ಲಿ ಜಾನುವಾರುಗಳಿಗಿಂತಲೂ ಕನಿಷ್ಟ ರೀತಿಯಲ್ಲಿ ವ್ಯಾಪಾರಿಗಳನ್ನು ಸಾಗಿಸಲಾಗುತ್ತಿತ್ತು. ಅದೇ ಯಲ್ಲಾಪುರದ ಅರಬೈಲ್ ಬಳಿ ಹಲವು ಸಾವು-ನೋವುಗಳಿಗೆ ಮೂಲ ಕಾರಣವಾಗಿದೆ.
ನಿಯಮಗಳ ಪ್ರಕಾರ ಸರಕು ಸಾಗಾಣಿಕೆಗೆ ಮೀಸಲಿರುವ ವಾಹನಗಳಲ್ಲಿ ಪ್ರಯಾಣಿಕರನ್ನು ಸಾಗಿಸುವುದು ಅಪರಾಧ. ಅದಾಗಿಯೂ ಪ್ರತಿ ವಾರವೂ ಸವಣೂರಿನ ವ್ಯಾಪಾರಿಗಳು ಸರಕು ಸಾಗಾಣಿಕಾ ವಾಹನದಲ್ಲಿಯೇ ತಾವು ಸಂಚರಿಸುತ್ತಿದ್ದರು. ಲಾರಿ ಹಿಂಬದಿ ತರಕಾರಿ ಮೂಟೆಗಳನ್ನು ತುಂಬಿ ಅದರ ಮೇಲೆಯೇ ಕುಳಿತು ಬರುತ್ತಿದ್ದರು. ಕುಮಟಾ ಸಂತೆ ಮುಗಿಸಿ ಗೋಕರ್ಣ, ಹೊನ್ನಾವರಕ್ಕೆ ಸಹ ಅದೇ ರೀತಿ ತೆರಳುತ್ತಿದ್ದರು. ವಾರದ ಸಂತೆ ಮುಗಿದ ನಂತರ ಮರಳಿ ಅದೇ ಲಾರಿ ಮೂಲಕ ಊರು ಸೇರುತ್ತಿದ್ದರು.
ಸರಕು ಸಾಕಾಣಿಕಾ ವಾಹನದಲ್ಲಿ ಮನುಷ್ಯರನ್ನು ಸಾಗಿಸುವುದು ಅಪರಾಧ ಎಂದು ಆ ವ್ಯಾಪಾರಿಗಳಿಗೆ ಅರಿವಿಲ್ಲ ಎಂದಲ್ಲ. ಸಮಯ ಹಾಗೂ ಕಾಸಿನ ಉಳಿತಾಯಕ್ಕಾಗಿ ಅವರು ಆ ಲಾರಿಗಳಲ್ಲಿಯೇ ಸಂಚಾರ ಮಾಡುತ್ತಿದ್ದರು. ಸಾವನಪ್ಪಿದ ಎಲ್ಲರೂ ಬಡವರಾಗಿದ್ದರೂ, ಪ್ರತ್ಯೇಕ ಸಾರಿಗೆ ಮೂಲಕ ಸಂತೆ ನಡೆಯುವ ಸ್ಥಳ ತಲುಪಲು ಸಮಸ್ಯೆಯಿರಲಿಲ್ಲ. ಅದಾಗಿಯೂ ಆ ವ್ಯಾಪಾರಿಗಳು ಪ್ರಯಾಣಿಕರ ವಾಹನ ಬಾಡಿಗೆ ಪಡೆದು ಅದರಲ್ಲಿ ಊರು ತಿರುಗಾಡಲು ಆಸಕ್ತಿವಹಿಸಿರಲಿಲ್ಲ. ಸರ್ಕಾರಿ ಬಸ್ಸುಗಳನ್ನು ಸಹ ಅವರು ನಂಬಿರಲಿಲ್ಲ.
ಸರಕು ಸಾಗಾಟ ವಾಹನಗಳಲ್ಲಿ ಪೊಲೀಸರಿಗೆ ಕಾಣದಂತೆ ವ್ಯಾಪಾರಿಗಳು ಅಡಗಿ ಕೂರುತ್ತಿದ್ದರು. ತರಕಾರಿ ತುಂಬಿ ತಾಡಪತ್ರೆ ಹೊದಸಿದ ನಂತರ ಅದರೊಳಗೆ ನಿದ್ರಿಸಿ ಬರುವ ವ್ಯಾಪಾರಿಗಳ ಸಂಖ್ಯೆ ಹೆಚ್ಚಿತ್ತು. ಇನ್ನೂ ಹೆಚ್ಚು ಎಂದರೆ ಹೆಚ್ಚಿನ ಪೊಲೀಸರು ಭದ್ರತೆಯಲ್ಲಿ ಇರದ ರಾತ್ರಿ ಸಮಯದಲ್ಲಿಯೇ ಆ ವಾಹನಗಳು ಒಂದು ಊರಿನಿಂದ ಇನ್ನೊಂದು ಊರಿಗೆ ಸಂಚರಿಸುತ್ತಿತ್ತು. ತಪಾಸಣಾ ಕೇಂದ್ರಗಳಲ್ಲಿ ಪೊಲೀಸರು ಕೈ ಅಡ್ಡ ಮಾಡಿದರೂ ಮಾನವೀಯ ಕಾರಣಗಳನ್ನು ಹೇಳಿ ತಪ್ಪಿಸಿಕೊಳ್ಳುತ್ತಿದ್ದರು.
ಉತ್ತರ ಕನ್ನಡ ಜಿಲ್ಲೆಯಲ್ಲಿ ಸರಕು ಸಾಕಾಣಿಕಾ ವಾಹನದಲ್ಲಿ ಪ್ರಯಾಣಿಕರನ್ನು ಕರೆದೊಯ್ಯುವುದು ಇದೇ ಮೊದಲಲ್ಲ. ಅನೇಕ ಬಾರಿ ಪೊಲೀಸರು ಹಾಗೂ ಆರ್‌ಟಿಓ ಸಿಬ್ಬಂದಿ ಈ ಬಗ್ಗೆ ಕಾರ್ಯಾಚರಣೆ ನಡೆಸಿ ದಂಡ ವಿಧಿಸಿದರೂ ಜನ ಜಾಗೃತಿ ಮೂಡಿಲ್ಲ. `ಸರಕು ಸಾಕಾಣಿಕಾ ವಾಹನದಲ್ಲಿ ಪ್ರಯಾಣಿಕರನ್ನು ಸಾಗಿಸಿರುವುದನ್ನು ಸಹ ಗಂಭೀರವಾಗಿ ಪರಿಗಣಿಸಲಾಗಿದೆ. ತನಿಖೆ ನಂತರ ಎಲ್ಲಾ ಬಗೆಯ ಸತ್ಯಗಳು ಹೊರ ಬರಲಿದ್ದು, ಈ ಬಗ್ಗೆಯೂ ಕಟ್ಟುನಿಟ್ಟಿನ ಕ್ರಮ ಜರುಗಿಸಲಾಗುತ್ತದೆ’ ಎಂದು ಪಶ್ಚಿಮವಲಯದ ಐಜಿಪಿ ಅಮೀತ್ ಸಿಂಗ್ ತಿಳಿಸಿದರು.