ಯಲ್ಲಾಪುರದ ಅರಬೈಲ್ ಬಳಿ ಬುಧವಾರ ನಸುಕಿನಲ್ಲಿ ಲಾರಿ ಪಲ್ಟಿಯಾಗಿದ್ದರಿಂದ 10 ಜನ ಸಾವನಪ್ಪಿದ್ದಾರೆ. 19 ಜನ ಗಾಯಗೊಂಡಿದ್ದಾರೆ. ಮತ್ತೆ ನಾಲ್ವರಿಗೆ ಸಣ್ಣಪುಟ್ಟ ಗಾಯಗಳಾಗಿದೆ. ತರಕಾರಿ ಮೂಟೆಗಳ ಮೇಲೆ ಮಲಗಿದ್ದ ಅನೇಕರು ನಿದ್ರೆಯ ಮಂಪರಿನಲ್ಲಿಯೇ ಕೊನೆ ಉಸಿರೆಳೆದಿದ್ದಾರೆ. ಮೈಮೇಲೆ ಮೂಟೆಗಳು ಬಿದ್ದಿದ್ದರಿಂದ ಉಸಿರಾಡಲು ಸಮಸ್ಯೆ ಅನುಭವಿಸುತ್ತಿದ್ದವರನ್ನು ಆ ಊರಿನ ಕೆಲವರು ರಕ್ಷಿಸಿದ್ದಾರೆ.
ಹಾವೇರಿ ಜಿಲ್ಲೆಯ ಸವಣೂರಿನ 33 ವ್ಯಾಪಾರಿಗಳು ಸೇರಿ ಮಂಗಳವಾರ ರೈತರಿಂದ ತರಕಾರಿ ಖರೀದಿಸಿದ್ದರು. ಕುಮಟಾ, ಹೊನ್ನಾವರ ಹಾಗೂ ಗೋಕರ್ಣದ ಸಂತೆಯಲ್ಲಿ ಅದನ್ನು ಮಾರಿ ಬದುಕು ನಡೆಸಲು ನಿರ್ಧರಿಸಿದ್ದರು. ತರಕಾರಿ ತುಂಬಿದ ಲಾರಿಯಲ್ಲಿ ವ್ಯಾಪಾರಿಗಳು ಕೂತು ಕುಮಟಾಗೆ ಹೋಗುತ್ತಿದ್ದರು. ಬುಧವಾರ ನಸುಕಿನ ವೇಳೆ ಯಲ್ಲಾಪುರದ ಅರಬೈಲ್ ಬಳಿ ಲಾರಿ ಪಲ್ಟಿಯಾಯಿತು. ಪರಿಣಾಮ 9 ಜನ ಸ್ಥಳದಲ್ಲಿಯೇ ಸಾವನಪ್ಪಿದರು. ಆಸ್ಪತ್ರೆಗೆ ತರುವಾಗ ಇನ್ನೊಬ್ಬರು ಕೊನೆ ಉಸಿರೆಳೆದರು.
ಲಾರಿ ಅಡಿಗೆ ಬಿದ್ದು ಹೊರಳಾಡುತ್ತಿದ್ದ ಕೆಲವರನ್ನು ಗುಳ್ಳಾಪುರದ ಶೇಖರ ಡಕ್ಕೊಳ್ಳಿ, ಮಂಜು ಕಾಗೇ, ರಾಘು ಬಾಂದೇಕರ, ಪವನ ಗುಳ್ಳಾಪುರ ಹಾಗೂ ಬಾಲಕೃಷ್ಣ ನಾಯ್ಕ ಅರಬೈಲ್ ಮೇಲೆತ್ತಿ ಬದುಕಿಸಿದರು. ಪಿಐ ರಮೇಶ ಹಾನಾಪುರ ಪೊಲೀಸ್ ಸಿಬ್ಬಂದಿ ಹರೀಶ ನಾಯ್ಕ ಸ್ಥಳದಲ್ಲಿದ್ದು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿರುವುದು ಕಂಡು ಬಂದಿತು. ಗಾಯಾಳುಗಳನ್ನು ಐದು ಆಂಬುಲೆನ್ಸ ಮೂಲಕ ಆಸ್ಪತ್ರೆಗೆ ಸಾಗಿಸಿದರೆ ಐದು ಶವಗಳನ್ನು ಅಲ್ಲಿನ ವಿಜಯ ಸಿದ್ದಿ ಎಂಬಾತರು ತಮ್ಮ ಪಿಕ್ ಅಪ್ ವಾಹನದಲ್ಲಿ ಹಾಕಿಕೊಂಡು ಬಂದು ಆಸ್ಪತ್ರೆಗೆ ತಲುಪಿಸಿದರು.
ಫಯಾಜ್ ಜಮಖಂಡಿ (45), ವಾಸಿಮ್ ಮುಡಿಗೇರಿ (25) ಇಜಜ್ ಮುಲ್ಲಾ (20) ಸಾದುಕ್ ಪರಾಸ್ (30), ಗುಲಾಮ್ ಜವಳಿ, ಇಮ್‌ತಿಯಾಜ್ ಮುಡಗೇರಿ (40) ಅಲ್ಪಾಜ್ ಮಂಡಕಿ (25) ಜಿಲಾನಿ ಜಕಾತಿ (20), ಅಸ್ಲಾಂ ಬೇಣ್ಣಿ (24), ಜಲಾಲ್ ತಾರಾ (30) ಸಾವನಪ್ಪಿದವರು. ಇನ್ನೂ 7 ಜನರಿಗೆ ಅಲ್ಪ ಸ್ವಲ್ಪ ಗಾಯವಾಗಿದ್ದು, ಅವರು ಚೇತರಿಸಿಕೊಂಡಿದ್ದಾರೆ. ಗಂಭೀರ ಗಾಯಗೊಂಡ 12 ಜನರನ್ನು ಹುಬ್ಬಳ್ಳಿ ಕಿಮ್ಸ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಅಪಘಾತ ಹೇಗಾಯ್ತು? ಲಾರಿಯ ಕ್ಯಾಬೀನ್’ನಲ್ಲಿ ಕೂತಿದ್ದ ರಿಯಾಜ್ ಅಹ್ಮದ್ ಹೇಳಿದ್ದೇನು? ಇಲ್ಲಿ ನೋಡಿ..