10 ದಿನದ ಹಿಂದೆ ನಡೆದ ಭರತನಾಟ್ಯ ಕಾರ್ಯಕ್ರಮದಲ್ಲಿ ಮಹಿಳೆ ಜೊತೆ ಅನುಚಿತ ವರ್ತನೆ ಮಾಡಿದ ಕಾರಣಕ್ಕೆ ಔಷಧ ಪೂರೈಕೆದಾರ ಹಾಗೂ ವ್ಯಾಪಾರಿ ನಡುವೆ ಹೊಡೆದಾಟ ನಡೆದಿದೆ. ಹೊಡೆದಾಡಿಕೊಂಡ ಇಬ್ಬರೂ `ತನ್ನದೇನೂ ತಪ್ಪಿಲ್ಲ’ ಎಂದು ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ.
ಜನವರಿ 14ರಂದು ಶಿರಸಿಯ ತೋಟಗಾರ ಕಲ್ಯಾಣ ಮಂಟಪದಲ್ಲಿ ಭರತನಾಟ್ಯ ಆಯೋಜಿಸಲಾಗಿತ್ತು. ಶಿರಸಿ ಮಾರಿಕಾಂಬಾನಗರದ ಸಾಯಿ ಮಂದಿರ ಬಳಿಯ ಅನೀಲ ನಾಯ್ಕ ಅವರ ಮಗಳ ಪ್ರತಿಭಾ ಪ್ರದರ್ಶನಕ್ಕೆ ಅಲ್ಲಿ ವೇದಿಕೆ ಸಿದ್ಧವಾಗಿತ್ತು. `ಭರತನಾಟ್ಯದ ಅವಧಿಯಲ್ಲಿ ಅನೀಲ ನಾಯ್ಕ ಅವರು ದುರುದ್ದೇಶದಿಂದ ತಮ್ಮ ಪತ್ನಿಯ ಮೈ ಮುಟ್ಟಿದ್ದಾರೆ’ ಎಂದು ಬನವಾಸಿ ರಸ್ತೆಯ ಗೋಲಗರ ಓಣಿಯ ಮೆಡಿಕಲ್ ರೆಪ್ರಸೆಂಟಿವ್ ರೋಷನ್ ದೂರಿದ್ದಾರೆ.
ಇದೇ ವಿಷಯವಾಗಿ ಅನೀಲ ನಾಯ್ಕ ಹಾಗೂ ರೋಷನ್ ನಡುವೆ ಮಾತಿಗೆ ಮಾತು ಬೆಳೆದಿದೆ. ಇಬ್ಬರ ನಡುವೆ ಮನಸ್ತಾಪ ಉಂಟಾಗಿದೆ. ಅದು ಮುಂದುವರೆದಿದ್ದು, ಜನವರಿ 24ರಂದು ಟಿಎಸ್‌ಎಸ್ ಆಸ್ಪತ್ರೆಯ ಕಾರು ನಿಲುಗಡೆ ಜಾಗದಲ್ಲಿ ಹೊಡೆದಾಟದ ಸ್ವರೂಪ ಪಡೆದಿದೆ. `ಆಸ್ಪತ್ರೆಯಲ್ಲಿ ದಾಖಲಾಗಿರುವ ತನ್ನ ತಾಯಿಗೆ ಊಟ ಕೊಟ್ಟು ಮರಳುವಾಗ ರೋಷನ್ ಅಮೀನ್ ಹಾಗೂ ಪ್ರಸನ್ನ ಕುಮಾರ ಅಡ್ಡಗಟ್ಟಿ ಹೊಡೆದಿದ್ದಾರೆ’ ಎಂದು ಅನೀಲ ನಾಯ್ಕ ಆರೋಪಿಸಿದ್ದಾರೆ.
`ಆ ಇಬ್ಬರು ಸೇರಿ ನೆಲಕ್ಕೆ ಬೀಳಿಸಿ ಥಳಿಸಿದ್ದು, ಅಣ್ಣ ಪ್ರಶಾಂತ ನಾಯ್ಕ ಆಗಮಿಸಿ ತನ್ನನ್ನು ರಕ್ಷಿಸಿದರು. ಅದಾಗಿಯೂ ಪ್ರಶಾಂತ ನಾಯ್ಕ ಹಾಗೂ ನನಗೆ ಕೊಲೆ ಮಾಡುವುದಾಗಿ ಜೀವ ಬೆದರಿಕೆ ಒಡ್ಡಿದ್ದಾರೆ’ ಎಂದು ಅನೀಲ ನಾಯ್ಕ ಪೊಲೀಸರ ಮುಂದೆ ಅಳಲು ತೋಡಿಕೊಂಡಿದ್ದಾರೆ. ಇದಕ್ಕೆ ಪ್ರತಿಯಾಗಿ ರೋಷನ್ ಸಹ `ತಾನು ಡಾಕ್ಟರರನ್ನು ಭೇಟಿ ಮಾಡಿ ಮರಳುವಾಗ ಅಲ್ಲಿ ಎದುರಾದ ಅನೀಲ ನಾಯ್ಕ ತನ್ನೊಂದಿಗೆ ಜಗಳ ಮಾಡಿದರು.ಪತ್ನಿ ಮೈ ಮುಟ್ಟಿದರೂ ನಿಮ್ಮಿಂದ ಏನೂ ಮಾಡಲಾಗಿಲ್ಲ ಎಂಬ ರೀತಿ ಅನೀಲ ನಾಯ್ಕ ವ್ಯಂಗ್ಯದ ನಗೆ ಬೀರಿದ್ದು, ನಂತರ ಜಗಳವಾಡಿ ಕೈ ತಿರುಗಿಸಿ ನೋವು ಮಾಡಿದರು’ ಎಂದು ದೂರಿದ್ದಾರೆ.
ಅಲ್ಲಿನ ಭದ್ರತಾ ಸಿಬ್ಬಂದಿ ಆಗಮಿಸುವುದನ್ನು ನೋಡಿ ಹಲ್ಲೆ ಮಾಡುವುದನ್ನು ನಿಲ್ಲಿಸಿರುವ ಬಗ್ಗೆ ಈ ಇಬ್ಬರು ಪೊಲೀಸರಿಗೆ ನೀಡಿದ ದೂರಿನಲ್ಲಿ ವಿವರಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ವಿಚಾರಣೆ ಮುಂದುವರೆಸಿದ್ದಾರೆ.